ಅಂಚೆ ಇಲಾಖೆ ಸಣ್ಣ ಉಳಿತಾಯ ಖಾತೆದಾರರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಪಿಪಿಎಫ್, ಎನ್‌ಎಸ್‌ಸಿ, ಕೆವಿಪಿ ಸೇರಿದಂತೆ ಅಂಚೆ ಕಚೇರಿಯ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಕ್ಲೇಮ್ ಮಾಡಲು ಅಂಚೆ ಕಚೇರಿಯಲ್ಲಿ ಸಾಕ್ಷಿಗಳ ಉಪಸ್ಥಿತಿ ಅಗತ್ಯವಿಲ್ಲ. ಈ ಬಗ್ಗೆ ಅಂಚೆ ಇಲಾಖೆ ದೇಶಾದ್ಯಂತದ ಎಲ್ಲ ಅಂಚೆ ಕಚೇರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಅಂಚೆ ಕಚೇರಿಗೆ ಸಾಕ್ಷಿ ಹಾಕುವವರು ಬರಬೇಕಾಗಿಲ್ಲ. ಸಾಕ್ಷಿಗಳ ಗುರುತಿನ ಚೀಟಿ ಮತ್ತು ವಿಳಾಸ ಪುರಾವೆ ಕೆವೈಸಿ, ಸುತ್ತೋಲೆ ನಿರ್ಧರಿಸಿದ ಸ್ವರೂಪದಲ್ಲಿರಬೇಕು ಎಂದು ಅಂಚೆ ಇಲಾಖೆ ಹೇಳಿದೆ. ಹೊಸ ಸುತ್ತೋಲೆಯ ಪ್ರಕಾರ, ಸಾಕ್ಷಿಯ ಸಹಿ ಮಾಡಿದ ಸ್ವಯಂ ದೃಢೀಕರಿಸಿದ ಐಡಿ ಪ್ರೂಫ್ ಮತ್ತು ವಿಳಾಸ ಪುರಾವೆಗಳನ್ನು ಕ್ಲೈಮ್ ಡಾಕ್ಯುಮೆಂಟ್‌ಗೆ ಲಗತ್ತಿಸಿದ್ದರೆ ಸಾಕಾಗುತ್ತದೆ.
ಪಿಪಿಎಫ್ ಅಥವಾ ಇನ್ನಾವುದೇ ಸಣ್ಣ ಉಳಿತಾಯ ಯೋಜನೆ ಹೊಂದಿದ್ದ ಮೃತ ವ್ಯಕ್ತಿಗಳ ಹಣವನ್ನು ಕ್ಲೇಮ್ ಮಾಡಲು, ಅಂಚೆ ಕಚೇರಿಯ ಅಧಿಕಾರಿಗಳು 2 ಸಾಕ್ಷಿಗಳನ್ನು ಅಂಚೆ ಕಚೇರಿಗೆ ಕರೆತರಲು ಕೇಳುತ್ತಿದ್ದಾರೆ. ಇದು ಸಮಸ್ಯೆಯಾಗ್ತಿದೆ ಎಂದು ಅನೇಕರು ಅಂಚೆ ಕಚೇರಿಗೆ ದೂರು ನೀಡಿದ್ದರು. ಇದ್ರ ನಂತ್ರ ಅಂಚೆ ಕಚೇರಿ ಈ ಸುತ್ತೋಲೆ ಹೊರಡಿಸಿದೆ.
ಗುರುತಿನ ಚೀಟಿಗಾಗಿ ದಾಖಲೆಯಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಫೋಟೋ ಹೊಂದಿರುವ ರೇಷನ್ ಕಾರ್ಡ್, ಪೋಸ್ಟ್ ಆಫೀಸ್ ಗುರುತಿನ ಚೀಟಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡುವ ಯಾವುದೇ ಗುರುತಿನ ಚೀಟಿ ನೀಡಬಹುದು.
ವಿಳಾಸ ಪುರಾವೆಯಾಗಿ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಫೋಟೋದೊಂದಿಗೆ ರೇಷನ್ ಕಾರ್ಡ್, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹೊರಡಿಸಿದ ಯಾವುದೇ ಗುರುತಿನ ಚೀಟಿ, ಕೆಲಸ ಮಾಡುವ ಕಂಪನಿ ವಿಳಾಸವಿರುವ ಸಂಬಳ ಸ್ಲಿಪ್, ವಿದ್ಯುತ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್, ಆಸ್ತಿ ತೆರಿಗೆ ರಶೀದಿ, ಯಾವುದೇ ಸರ್ಕಾರಿ ಅಥವಾ ಮಾನ್ಯತೆ ಪಡೆದ ಖಾಸಗಿ ಕಂಪನಿ ಮತ್ತು ಬ್ಯಾಂಕ್ ನೀಡಿದ ಪರವಾನಗಿ ಒಪ್ಪಂದ, ಅಂಚೆ ಕಚೇರಿಯ ಪಾಸ್ ಪುಸ್ತಕ ,ಬ್ಯಾಂಕ್ ಖಾತೆ ಪಾಸ್‌ಬುಕ್ ನೀಡಬಹುದು.