ಬೆಂಗಳೂರು: ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳನ್ನು ಬೃಹತ್ ಬ್ಯಾಂಕ್ ಗಳನ್ನಾಗಿ ಮಾಡುವ ಉದ್ದೇಶದಿಂದ ಈಗಾಗಲೇ ಹಲವು ಬ್ಯಾಂಕ್ ಗಳನ್ನು ವಿಲೀನ ಮಾಡಲಾಗಿದೆ. ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಮಾಡಲಾಗಿದ್ದರೆ, ಎಸ್‌ಬಿಐನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿದಂತೆ ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಅನ್ನು ವಿಲೀನಗೊಳಿಸಲಾಗಿತ್ತು.
ಅದೇ ರೀತಿ ಕೆನರಾ ಬ್ಯಾಂಕ್ ನಲ್ಲಿ ಸಿಂಡಿಕೇಟ್ ಬ್ಯಾಂಕ್ ನ್ನು ವಿಲೀನಗೊಳಿಸಲಾಗಿದೆ. ಈ ವಿಲೀನ ಪ್ರಕ್ರಿಯೆಯಿಂದ ಗ್ರಾಹಕರಿಗೆ ಯಾವುದೇ ತೊಡಕಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆಯಾದರೂ ಬ್ಯಾಂಕ್ ವ್ಯವಹಾರಗಳು ಡಿಜಿಟಲೀಕರಣವಾಗಿರುವುದರಿಂದ ಕೆಲ ಗ್ರಾಹಕರಿಗೆ ತಾಂತ್ರಿಕ ಸಮಸ್ಯೆಗಳುಂತಾಗುತ್ತಿವೆ.
ಉದಾಹರಣೆಗೆ ವಿಜಯಾ ಬ್ಯಾಂಕ್ ನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನ ಮಾಡಲಾಗಿದ್ದು, ಈಗಾಗಲೇ ವಿಜಯಾ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದವರಿಗೆ ಅಕೌಂಟ್ ನಂಬರ್ ಬದಲಾಗಿದೆ. ಇದರಿಂದಾಗಿ ʼಭೀಮಾʼದಂತಹ ಆಪ್ ಉಪಯೋಗಿಸುವಾಗ ಹಾಗೂ ಆಪ್ ಮೂಲಕ ಹಣ ವರ್ಗಾವಣೆ ಮಾಡುವಾಗ ಹಲವು ಗ್ರಾಹಕರಿಗೆ ಸಮಸ್ಯೆಗಳಾಗುತ್ತಿದ್ದು, ಇದನ್ನು ಪರಿಹರಿಸಿಕೊಳ್ಳಲು ಬ್ಯಾಂಕ್ ಗೆ ಎಡೆತಾಕುವಂತಾಗಿದೆ.