ಲಾಕ್ ಡೌನ್ ಸಡಿಲಗೊಂಡ ನಂತ್ರ ಭಾರತೀಯರು ನಿಧಾನವಾಗಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಹಾಗಾಗಿ ಇನ್ನೂ ಶೇಕಡಾ 90 ರಷ್ಟು ಭಾರತೀಯರು ಖರ್ಚಿನ ಬಗ್ಗೆ ಜಾಗರೂಕರಾಗಿದ್ದಾರೆ. ಆಲೋಚನೆ ಮಾಡಿ ವಸ್ತುಗಳನ್ನು ಖರೀದಿ ಮಾಡ್ತಿದ್ದಾರೆ. ಜಾಗತಿಕವಾಗಿ ಶೇಕಡಾ 75 ರಷ್ಟು ಜನರು ತಮ್ಮ ಖರ್ಚಿನ ಬಗ್ಗೆ ಜಾಗರೂಕರಾಗಿದ್ದಾರೆಂದು ಸಮೀಕ್ಷೆಯೊಂದು ಹೇಳಿದೆ.
ಜುಲೈ ತಿಂಗಳಲ್ಲಿ ಜಾಗತಿಕವಾಗಿ ಶೇಕಡಾ 46 ರಷ್ಟು ಜನರು ತಮ್ಮ ಖರ್ಚಿನ ಬಗ್ಗೆ ಜಾಗರೂಕರಾಗಿದ್ದರು. ಜುಲೈನಲ್ಲಿಯೇ ಈ ಅಂಕಿ ಅಂಶವು ಭಾರತದಲ್ಲಿ ಶೇಕಡಾ 56 ರಷ್ಟಿತ್ತು. ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 76 ರಷ್ಟು ಜನರು ಕೋವಿಡ್ -19 ರ ಕಾರಣದಿಂದಾಗಿ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ, ಹಾಗಾಗಿ ಆಲೋಚನೆ ಮಾಡಿ ಖರ್ಚು ಮಾಡ್ತಿದ್ದೇವೆ ಎಂದಿದ್ದಾರೆ.
ವಿಶ್ವದ 12 ಮಾರುಕಟ್ಟೆಗಳಲ್ಲಿ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಹಾಂಗ್ ಕಾಂಗ್, ಭಾರತ, ಇಂಡೋನೇಷ್ಯಾ, ಕೀನ್ಯಾ, ಚೀನಾ, ಮಲೇಷ್ಯಾ, ಪಾಕಿಸ್ತಾನ, ಸಿಂಗಾಪುರ್, ತೈವಾನ್, ಯುಎಇ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿವೆ. ಸಮೀಕ್ಷೆಯ ಪ್ರಕಾರ, ಶೇಕಡಾ 74 ರಷ್ಟು ಭಾರತೀಯರು ಆನ್‌ಲೈನ್ ಶಾಪಿಂಗ್‌ನಲ್ಲಿ ಸಕ್ರಿಯವಾಗಿದ್ದಾರೆ. ಆದಾಗ್ಯೂ, ಜಾಗತಿಕವಾಗಿ ಈ ಅಂಕಿ ಅಂಶವು ಕೇವಲ ಶೇಕಡಾ 64 ರಷ್ಟಿದೆ. ಭಾರತದಲ್ಲಿ ಕೇವಲ ಶೇಕಡಾ 56 ರಷ್ಟು ಜನರು ಮಾತ್ರ ಹೊಸ ಬಟ್ಟೆಗಳನ್ನು ಖರೀದಿಸಿದ್ದಾರೆ. ಈ ಅಂಕಿ-ಅಂಶ ಜಾಗತಿಕವಾಗಿ ಶೇಕಡಾ 55 ರಷ್ಟಿದೆ.