ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಒಟ್ಟು ಐದು ಹಂತಗಳಲ್ಲಿ ಲಾಕ್ಡೌನ್ ಜಾರಿಗೊಳಿಸಿದ್ದು, ಈಗ ಐದನೇ ಹಂತದ ಲಾಕ್ಡೌನ್ ಜಾರಿಯಲ್ಲಿದೆ. ಇದು ಜೂನ್ 30ರವರೆಗೆ ಮುಂದುವರೆಯುತ್ತದಾದರೂ ಬಹಳಷ್ಟು ಸಡಿಲಿಕೆ ನೀಡಿರುವ ಕಾರಣ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ.
ಲಾಕ್ಡೌನ್ ಸಂದರ್ಭದಲ್ಲಿ ಆದ ನಷ್ಟದಿಂದ ಸಾರ್ವಜನಿಕರು ಇನ್ನೂ ಹೊರಬಾರದಿರುವ ಮಧ್ಯೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬೆಲೆ ಏರಿಕೆ ವಾಹನ ಹೊಂದಿರುವವರನ್ನು ಮಾತ್ರವಲ್ಲದೆ ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ.
ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಾದರೆ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಸಹ ಏರಿಕೆಯಾಗಲಿದ್ದು, ಇದು ಜನಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಜೊತೆಗೆ ಸಾರ್ವಜನಿಕ ಸಾರಿಗೆ ವಾಹನಗಳ ಪ್ರಯಾಣ ವೆಚ್ಚವೂ ಸಹ ಹೆಚ್ಚಳವಾಗಲಿದೆ.
ಸರ್ಕಾರವೂ ಸಹ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಇದನ್ನು ಸರಿದೂಗಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ 6 ರೂಪಾಯಿಗಳವರೆಗೆ ಏರಿಕೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಒಂದೊಮ್ಮೆ ಈ ರೀತಿ ಏರಿಕೆ ಮಾಡಿದರೆ ಕೊರೊನಾ ಸಂಕಷ್ಟದ ಮಧ್ಯೆ ಸಾರ್ವಜನಿಕರಿಗೆ ಮತ್ತೊಂದು ಹೊರೆ ಬೀಳುವುದು ಮಾತ್ರ ನಿಶ್ಚಿತ.