ಕೋವಿಡ್- 19 ನಿಂದಾಗಿ ಸಂಕಷ್ಟಕ್ಕೀಡಾಗಿದ್ದ ಹೂವು ಬೆಳೆಗಾರರಿಗೆ ಪರಿಹಾರ ನೀಡುವ ಕಾರ್ಯಕ್ಕೆ ಇತ್ತೀಚೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದರು. 12735 ಹೆಕ್ಟೇರ್ ನಲ್ಲಿ ಹೂವು ಬೆಳೆದ ರೈತರಿಗೆ ಪರಿಹಾರವಾಗಿ ಫಸಲ್ ಭೀಮಾ ಯೋಜನೆಯಡಿ 31.83 ಕೋಟಿ ರೂ. ಪರಿಹಾರವನ್ನ ಸರ್ಕಾರ ಘೋಷಿಸಿತ್ತು. ಈ ಹಣವನ್ನು ನೇರವಾಗಿ ರೈತರ ಖಾತೆಗೆ ಹಾಕಲಾಗುತ್ತದೆ ಎಂದು ಹೇಳಲಾಗಿತ್ತು.
ಆದರೆ ಇದೀಗ ರೈತರ ಖಾತೆಗೆ ಹೋಗಬೇಕಿದ್ದ ಹಣ ಏರ್‌ಟೆಲ್‌ಗೆ ಹೋಗಿದೆ. ರೈತರು ತಮ್ಮ ತಮ್ಮ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದ ಕಾರಣ ಇದೀಗ ಈ ಹಣ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಈ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದರು. ಹಾಗಾಗಿ ಈ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕೂಡಲೇ ರೈತರು ಆಧಾರ್ ಸಂಖ್ಯೆಗೆ ಬ್ಯಾಂಕ್ ಅಕೌಂಟನ್ನು ಜೋಡಣೆ ಮಾಡಿ ಎಂದು ಹೇಳಿದ್ದಾರೆ. ಹಾಗೂ ಆಧಾರ್ ಲಿಂಕ್ ಆಗದೇ ಇರುವ ಖಾತೆಗಳ ಹಣ ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ನಲ್ಲಿ ಇದ್ದು, ರೈತರು ಏರ್‌ಟೆಲ್ ಔಟ್‌ಲೆಟ್‌ಗಳಿಗೆ ಹೋಗಿ ಹಣ ಪಡೆಯಬೇಕಿದೆ ಎಂದು ಮನವಿ ಮಾಡಿಕೊಂಡರು. ಈ ಬಗ್ಗೆ ಏರ್ ಟೆಲ್ ಕಂಪೆನಿಯ ಗಮನಕ್ಕೂ ತಂದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.