ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಪೆಟ್ರೋಲ್ ದರ ಈಗಾಗಲೇ ಅನೇಕ ನಗರಗಳಲ್ಲಿ ಶತಕ ಬಾರಿಸಿದೆ.
ರಾಜಸ್ಥಾನದಲ್ಲಿ ಮೊದಲ ಬಾರಿಗೆ 100 ರೂಪಾಯಿ ಗಡಿದಾಟಿದ ಪೆಟ್ರೋಲ್ ದರ ದೇಶದಲ್ಲಿ ಹಲವೆಡೆ 100 ರೂಪಾಯಿ ಗಡಿ ದಾಟಿ ಮುನ್ನುಗ್ಗುತ್ತಿದೆ. ಶಿವಮೊಗ್ಗದಲ್ಲಿಯೂ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಒಂದು ಲೀಟರ್ ಪೆಟ್ರೋಲ್ ಗೆ 100.14 ರೂಪಾಯಿ ಇದೆ. ಡೀಸೆಲ್ ದರ 92.87 ರೂಪಾಯಿಗೆ ತಲುಪಿದ್ದು, ಪವರ್ ಪೆಟ್ರೋಲ್ ದರ 103.69 ರೂಪಾಯಿ ಇದೆ. ಇಂದು ಪೆಟ್ರೋಲ್ ಒಂದು ಲೀಟರ್ ಗೆ 26 ಪೈಸೆ ಹೆಚ್ಚಳವಾಗಿದೆ. ಪೈಸೆಗಳ ಲೆಕ್ಕದಲ್ಲಿ ಏರಿಕೆಯಾದ ಪೆಟ್ರೋಲ್ ದರ ಈಗ 100 ರೂಪಾಯಿ ಗಡಿದಾಟಿದೆ.
ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಸೇರಿ ಹಲವೆಡೆ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಂದರ್ಭದಲ್ಲಿ ಪೆಟ್ರೋಲ್ ದರ ಗಗನಮುಖಿಯಾಗಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.