ಬೆಂಗಳೂರು: ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿಗೂ ಮುನ್ನ ಗ್ರಾಹಕರು ಸ್ವಲ್ಪ ಎಚ್ಚರದಿಂದರುವುದು ಒಳಿತು. ನಮ್ಮದೇ ಸ್ವಂತ ಸೂರಿನ ಆಸೆಗಾಗಿ ಕೋಟ್ಯಂತರ ರೂಪಾಯಿ ನೀಡಿ ಫ್ಲ್ಯಾಟ್ ಗಳನ್ನು ಖರೀದಿ ಮಾಡಿ ಬೆಂಗಳೂರಿನ ಪ್ರಸಿದ್ಧ ಅಪಾರ್ಟ್ ಮೆಂಟ್ ನಿವಾಸಿಗಳು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ.
ಎಲ್ ಆಂಡ್ ಟಿ ಕಂಪನಿಯ ಬ್ಯಾಟರಾಯನಪುರ ಬಳಿಯ ರೇನ್ ಟ್ರೀ ಬುಲೆವಾರ್ಡ್ ರೆಸಿಡೆನ್ಸಿ ನಿವಾಸಿಗಳು ಇದೀಗ ಮೂಲಸೌಕರ್ಯವಿಲ್ಲದೇ ಪರದಾಡುತ್ತಿದ್ದಾರೆ. ಕೋಟಿ ಕೋಟಿ ಹಣ ಪಡೆದು ಸುಸಜ್ಜಿತ ಫ್ಲ್ಯಾಟ್ ಒದಗಿಸುವುದಾಗಿ ಹೇಳಿ ಭರವಸೆ ನೀಡಿದ್ದ ಎಲ್ ಆಂಡ್ ಟಿ ಕಂಪನಿ, ಅಪಾರ್ಟ್ ಮೆಂಟ್ ನಲ್ಲಿ ಮನೆಗಳನ್ನು ನೀಡಿದೆ. ಕಳೆದ ಒಂದು ವರ್ಷಗಳಿಂದ ನಿವಾಸಿಗಳು ಕೂಡ ವಾಸವಾಗಿದ್ದಾರೆ. ಆದರೆ ನೀರು, ವಿದ್ಯುತ್, ಗ್ಯಾಸ್ ಕನೆಕ್ಷನ್ ಸೇರಿದಂತೆ ಯಾವುದೇ ರೀತಿಯ ಮೂಲಸೌಕರ್ಯ ಕೂಡ ಇಲ್ಲ.
ಬಿಲ್ಡಿಂಗ್ ಪ್ರಾಜೆಕ್ಟ್ ಮ್ಯಾನೇಜರ್ ಗೆ ಪ್ರಶ್ನಿಸಿದರೆ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಎಂಬುದು ಅಪಾರ್ಟ್ ಮೆಂಟ್ ನಿವಾಸಿಗಳ ಆಕ್ರೋಶ. ಆರಂಭದಲ್ಲಿ ಹಲವು ಸೌಕರ್ಯಗಳನ್ನು ನೀಡುತ್ತೇವೆ ಎಂದು ಹೇಳಿ ಹಣ ಪಡೆದು ಸೌಲಭ್ಯಗಳನ್ನು ಕಲ್ಪಿಸದೆ ವಂಚಿಸಿದ್ದಾರೆ ಎಂದು ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.