ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ. ಜುಲೈ ಒಂದರಿಂದ ಬ್ಯಾಂಕ್ ನ ಒಂದಿಷ್ಟು ಸೇವೆಗಳಲ್ಲಿ ಬದಲಾವಣೆ ತರಲಾಗುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ತಾತ್ಕಾಲಿಕವಾಗಿ ಬ್ಯಾಂಕ್ ಗಳಲ್ಲಿ ಜಾರಿಗೆ ತರಲಾಗಿತ್ತು. ಇದೀಗ ಈ ಸೇವೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅಷ್ಟೆ ಅಲ್ಲ ಜುಲೈ ಒಂದರಿಂದ ಹೆಚ್ಚುವರಿ ಶುಲ್ಕ ಕೂಡ ನೀಡಬೇಕಾದೀತು.
ಹೌದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ ಉಳಿತಾಯ ಖಾತೆಯ ಮೇಲೆ ಇನ್ಮುಂದೆ ಕಡಿಮೆ ಬಡ್ಡಿ ದರ ಸಿಗಲಿದೆ. ಸುಮಾರು ಶೇಕಡಾ 0.50 ರಷ್ಟು ಕಡಿತಗೊಳಿಸಿದೆ. ಇನ್ನು ಜುಲೈ 1 ರಿಂದ ಉಳಿತಾಯ ಖಾತೆಗೆ ವಾರ್ಷಿಕವಾಗಿ ಗರಿಷ್ಠ ಎಂದರೆ 3.25 ರಷ್ಟು ಬಡ್ಡಿ ಸಿಗಲಿದೆ. ಇತ್ತ ಎಸ್‌ಬಿಐ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡ ಉಳಿತಾಯ ಖಾತೆಯ ಬಡ್ಡಿದರವನ್ನು ಕಡಿತಗೊಳಿಸಿವೆ.
ಇನ್ನು ಬ್ಯಾಂಕ್ ಆಫ್ ಬರೋಡ ಕೂಡ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಈ ಹಿಂದೆ ಇದ್ದ ಖಾತೆಯನ್ನು ಒಂದಿಷ್ಟು ದಾಖಲೆ ನೀಡಿ ನವೀಕರಿಸುವಂತೆ ಸೂಚಿಸಿತ್ತು. ಈ ಬ್ಯಾಂಕ್ ನವೀಕರಣಕ್ಕಾಗಿ, ಆಧಾರ್, ಪಾನ್ ಮತ್ತು ಪಡಿತರ ಚೀಟಿ ಅಥವಾ ಜನನ ತಿಥಿ ಹೊಂದಿರುವ ಯಾವುದಾದರು ದಾಖಲಾತಿ ಸಲ್ಲಿಸಬೇಕು ಎಂದು ಹೇಳಿತ್ತು. ಒಂದು ವೇಳೆ ಸಲ್ಲಿಸದೆ ಹೋದಲ್ಲಿ ಖಾತೆ ಸ್ಥಗಿತಗೊಳ್ಳಲಿದೆ ಎಂದಿತ್ತು. ಆದರೆ ಇದೀಗ ನವೀಕರಣ ಮಾಡದೇ ಇರುವ ಖಾತೆಗಳನ್ನು ಸ್ಥಗಿತಗೊಳಿಸಲು ಬ್ಯಾಂಕ್ ಮುಂದಾಗಿದೆ. ಇನ್ನು ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇರಲೇಬೇಕು ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಎಟಿಎಮ್ ನಲ್ಲಿ ಹಣ ವಿಥ್ ಡ್ರಾ ಮಾಡಲು ನೀಡಿದ್ದ ಸಡಿಲಿಕೆ ಕೂಡ ಕೊನೆಗೊಳ್ಳುತ್ತಿದೆ.