ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ ಬಗ್ಗೆ ಆರ್.ಬಿ.ಐ. ಹೇಳಿದೆ.
ಬ್ಯಾಂಕ್ ಖಾತೆದಾರರ ಹಿತಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜುಲೈ 6, 2017 ರಂದು ಸುತ್ತೋಲೆ ಹೊರಡಿಸಿತ್ತು. ಖಾತೆಯಿಂದ ಅನಧಿಕೃತ ವಹಿವಾಟು ಅಥವಾ ವಂಚನೆ ಆದ್ರೆ ಗ್ರಾಹಕರು ಏನು ಮಾಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ರಿಸರ್ವ್ ಬ್ಯಾಂಕಿನ ಸುತ್ತೋಲೆಯ ಪ್ರಕಾರ, ಬ್ಯಾಂಕ್ ಖಾತೆಯಿಂದ ಅನಧಿಕೃತ ವಹಿವಾಟು ಅಥವಾ ವಂಚನೆ ಆದ್ರೆ ಯಾವುದೇ ವಿಧಾನದ ಮೂಲಕ ಮೂರು ದಿನಗಳಲ್ಲಿ ಬ್ಯಾಂಕಿಗೆ ತಿಳಿಸಬೇಕು. ಈ ಬಗ್ಗೆ ಬ್ಯಾಂಕ್ ಗೆ ಮಾಹಿತಿ ನೀಡುವುದು ಕಡ್ಡಾಯ. ನಿಮ್ಮ ತಪ್ಪು ಅಥವಾ ನಿರ್ಲಕ್ಷ್ಯದಿಂದಾಗಿ ಅನಧಿಕೃತ ವಹಿವಾಟು ಅಥವಾ ವಂಚನೆ ಸಂಭವಿಸದಿದ್ದರೆ, ನಿಮ್ಮ ನಷ್ಟದ ಸಂಪೂರ್ಣ ಪರಿಹಾರವನ್ನು ಬ್ಯಾಂಕ್ ನೀಡುತ್ತದೆ.
4 ರಿಂದ 7 ದಿನಗಳ ನಡುವೆ ಬ್ಯಾಂಕ್‌ಗೆ ಮಾಹಿತಿ ನೀಡಿದ್ದರೆ, ಈ ಸಂದರ್ಭದಲ್ಲಿ ನಿಮಗೆ ಸೀಮಿತ ಹೊಣೆಗಾರಿಕೆ ಇರುತ್ತದೆ. ಅನಧಿಕೃತ ವಹಿವಾಟಿನ ಮೌಲ್ಯದ ಒಂದು ಭಾಗವನ್ನು ನೀವು ಭರಿಸಬೇಕಾಗುತ್ತದೆ. ಬೇರೆ ಬೇರೆ ಉಳಿತಾಯ ಖಾತೆಗೆ ಬೇರೆ ಬೇರೆ ನಿಯಮವಿದೆ. ವಂಚನೆಯಾಗಿ 7 ದಿನಗಳ ನಂತ್ರ ನೀವು ಬ್ಯಾಂಕ್ ಗೆ ಮಾಹಿತಿ ನೀಡಿದ್ರೆ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಬ್ಯಾಂಕ್ ಮಂಡಳಿ ನಿರ್ಧಾರ ತೆಗೆದುಕೊಳ್ಳುತ್ತದೆ.