ಬಿಎಸ್ 4 ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಮಾರ್ಚ್ 31 ರ ಗಡುವಿನ ಮೊದಲು ವಾಹನ ಖರೀದಿಸಿದ್ದು, ನೋಂದಣಿ ಸಾಧ್ಯವಾಗದವರಿಗೆ ವಾಹನ ನೋಂದಣಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದ್ರೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಬಿಎಸ್ -4 ವಾಹನಗಳ ಮಾರಾಟ ಮತ್ತು ನೋಂದಣಿಗೆ ಸುಪ್ರೀಂ ಕೋರ್ಟ್ ಮಾರ್ಚ್ 31 ರ ಗಡುವನ್ನು ನೀಡಿತ್ತು. ಈ ಮಧ್ಯೆ ಮಾರ್ಚ್ 22 ರಂದು ಸಾರ್ವಜನಿಕ ಕರ್ಫ್ಯೂ ಇತ್ತು. ಮಾರ್ಚ್ 25 ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಯಾಯ್ತು.ಈ ಕಾರಣಕ್ಕೆ ವಿತರಕರ ಬಳಿ ಹೆಚ್ಚಿನ ಬಿಎಸ್ -4 ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳು ಇದ್ದವು.
ಹಾಗಾಗಿ ಅದ್ರ ಮಾರಾಟ ಹಾಗೂ ನೋಂದಣಿ ಗಡುವನ್ನು ವಿಸ್ತರಿಸುವಂತೆ ವಿತರಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ವಿತರಕರಿಗೆ ಶೇಕಡಾ 10 ರಷ್ಟು ಬಿಎಸ್ -4 ವಾಹನಗಳನ್ನು ಮಾರಾಟ ಮಾಡಲು ಅನುಮತಿ ನೀಡಿತ್ತು.
ಈಗ ಮಾರ್ಚ್ ನಲ್ಲಿ ಮಾರಾಟವಾದ ವಾಹನಗಳ ನೋಂದಣಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ.