ಸಾರ್ವಜನಿಕ ಭವಿಷ್ಯ ನಿಧಿ ಅತ್ಯಂತ ಸುರಕ್ಷಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಆದ್ರೆ ಹೂಡಿಕೆ ಮೊದಲು ಇದ್ರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಪಿಪಿಎಫ್ , ಕೇಂದ್ರೀಕೃತ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳ ಮೂಲಕ ಭಾರತ ಸರ್ಕಾರ ನೀಡುವ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯನ್ನು ಹಣಕಾಸು ಸಚಿವಾಲಯದ ರಾಷ್ಟ್ರೀಯ ಉಳಿತಾಯ ಸಂಸ್ಥೆ 1968 ರಲ್ಲಿ ಪ್ರಾರಂಭಿಸಿತು. ಪಿಪಿಎಫ್‌ನ ಬಡ್ಡಿ ದರವನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ. ಸದ್ಯ ಶೇಕಡಾ 7.10ರಷ್ಟು ಬಡ್ಡಿ ದರವಿದೆ.
ಎಸ್ಬಿಐ ಗ್ರಾಹಕರಲ್ಲದವರಿಗೂ ಪಿಪಿಎಫ್ ಖಾತೆ ತೆರೆಯಲು ಅವಕಾಶ ನೀಡುತ್ತದೆ. ಅಪ್ರಾಪ್ತ ವಯಸ್ಕರು ಮತ್ತು ವಯಸ್ಕರು ಇಬ್ಬರೂ ಎಸ್‌ಬಿಐನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಹೂಡಿಕೆ ಪಕ್ವವಾಗುವವರೆಗೆ ಪ್ರತಿ ವರ್ಷ ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ಮುಕ್ತಾಯದ ಮೊದಲು ಮೊತ್ತವನ್ನು ಹಿಂಪಡೆಯಬಹುದು. ಮುಕ್ತಾಯದ ನಂತ್ರವೂ ನಿಮ್ಮ ಖಾತೆಯನ್ನು ವಿಸ್ತರಿಸಬಹುದು. ಮುಕ್ತಾಯದ ಅವಧಿ 15 ವರ್ಷವಾಗಿರುತ್ತದೆ. ಮಾಸಿಕ ಬಡ್ಡಿ ಶೇಕಡಾ 7.10ರಷ್ಟಿದೆ.
ನೀವು 25000 ರೂಪಾಯಿ ವಾರ್ಷಿಕ ಹೂಡಿಕೆ ಮಾಡಿದ್ರೆ 15 ವರ್ಷಗಳ ಅವಧಿಯಲ್ಲಿ ನಿಮ್ಮ ಒಟ್ಟು ಹೂಡಿಕೆ 375,000 ರೂಪಾಯಿಯಾಗುತ್ತದೆ. ನೀವು ಗಳಿಸಿದ ಬಡ್ಡಿ 303,035 ರೂಪಾಯಿ. ಮುಕ್ತಾಯದ ಸಮಯದಲ್ಲಿ ನೀವು 678,035 ರೂಪಾಯಿ ಪಡೆಯುತ್ತೀರಿ.