ಗೃಹ ಸಾಲ ತೆಗೆದುಕೊಳ್ಳುವುದು ಬಹಳ ಬೇಸರದ ವಿಷ್ಯ. ಬ್ಯಾಂಕ್ ಸಾಕಷ್ಟು ದಾಖಲೆಗಳನ್ನು ಕೇಳುತ್ತವೆ. ಕ್ರೆಡಿಟ್ ಹಿಸ್ಟ್ರಿ ಪರಿಶೀಲಿಸುತ್ತದೆ. ಕೆಲಸದಿಂದ ಹಿಡಿದು ವೈಯಕ್ತಿಕ ವಿಚಾರದವರೆಗೆ ಎಲ್ಲವನ್ನೂ ವಿಚಾರಿಸುತ್ತದೆ. ಎಲ್ಲ ನೀಡಿದ್ರೂ ಗೃಹ ಸಾಲ ಸಿಗುವ ಗ್ಯಾರಂಟಿ ಇರುವುದಿಲ್ಲ. ಆದ್ರೆ ಇದಕ್ಕೆ ಬೇಸರಪಟ್ಟುಕೊಳ್ಳಬೇಕಾಗಿಲ್ಲ.
ಮನೆ ಖರೀದಿಸಲು ಬ್ಯಾಂಕಿನಿಂದ ಗೃಹ ಸಾಲ ತೆಗೆದುಕೊಳ್ಳುವುದು ಅನಿವಾರ್ಯವಲ್ಲ. ಇತರ ಮಾರ್ಗಗಳಿವೆ. ಪೋಷಕರು, ಸ್ನೇಹಿತರು ಅಥವಾ ಸಂಬಂಧಿಕರು ಆರ್ಥಿಕವಾಗಿ ಸಮರ್ಥರಾಗಿದ್ದರೆ, ಅವರಿಂದ ಗೃಹ ಸಾಲ ತೆಗೆದುಕೊಳ್ಳಬಹುದು.
ಬ್ಯಾಂಕುಗಳಿಗೆ ದಾಖಲೆಗಳನ್ನು ನೀಡಿ ಅಲೆದಾಡುವುದು ಇದ್ರಿಂದ ತಪ್ಪುತ್ತದೆ. ಬೇಗ ಸಾಲ ನಿಮಗೆ ಸಿಗುತ್ತದೆ.
ಕಡಿಮೆ ಬಡ್ಡಿಗೆ ಬ್ಯಾಂಕುಗಳಿಂದ ಸಾಲ ಪಡೆಯುತ್ತೀರಿ. ಸಾಲಗಾರ ಮತ್ತು ಸಾಲ ಕೊಡುವವನ ಮಾತುಕತೆ ನಂತ್ರ ಬಡ್ಡಿ ನಿರ್ಧಾರವಾಗುತ್ತದೆ.
ಸಾಲ ಕೊಡುವವರು ನಿಮ್ಮ ಬಗ್ಗೆ ಚೆನ್ನಾಗಿ ತಿಳಿದಿದ್ದರೆ ಕ್ರೆಡಿಟ್ ಹಿಸ್ಟ್ರಿ, ಉದ್ಯೋಗ ಅಥವಾ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸುವುದಿಲ್ಲ.
ಸಾಲ ಮರುಪಾವತಿ ಅವಧಿಯನ್ನು ಇಬ್ಬರು ಮಾತನಾಡಿ ನಿರ್ಧರಿಸಬೇಕಾಗುತ್ತದೆ.
ಸಾಲ ಮರು ಪಾವತಿಸುವಲ್ಲಿ ಸ್ವಲ್ಪ ವಿಳಂಬವಾಗಿದ್ದರೂ ಸಹ ನಿಮ್ಮ ಕುಟುಂಬಸ್ಥರು ಇದಕ್ಕೆ ಒಪ್ಪಿಗೆ ನೀಡುತ್ತಾರೆ. ಬ್ಯಾಂಕುಗಳಂತೆ ಗೃಹ ಸಾಲಕ್ಕೆ ಯಾವುದೇ ಕಟ್ಟುನಿಟ್ಟಿನ ಷರತ್ತುಗಳಿರುವುದಿಲ್ಲ. ಸಂಬಂಧಿಕರಿಂದ ಗೃಹ ಸಾಲ ಪಡೆಯುವ ಮೊದಲು ಕಾನೂನು ತಜ್ಞರ ಸಲಹೆ ಪಡೆಯಬೇಕು. ಇಲ್ಲವಾದ್ರೆ ಮುಂದೆ ಸಮಸ್ಯೆ ಎದುರಾಗಬಹುದು.
ಗೃಹ ಸಾಲಗಳ ಮೇಲೆ ಎರಡು ರೀತಿಯ ತೆರಿಗೆ ಪ್ರಯೋಜನಗಳಿವೆ. ಮೊದಲ ಸಾಲದ ಅಸಲು ಮೊತ್ತದ ಮೇಲೆ ಸೆಕ್ಷನ್ 80 ಸಿ ಅಡಿಯಲ್ಲಿ ವಾರ್ಷಿಕ 1.5 ಲಕ್ಷ ರೂಪಾಯಿ ರಿಯಾಯಿತಿ ಸಿಗುತ್ತದೆ. ಎರಡನೇಯದು ಸಾಲದ ಮೇಲಿನ ಬಡ್ಡಿಗೆ ಸೆಕ್ಷನ್ 24 ರ ಅಡಿಯಲ್ಲಿ 2 ಲಕ್ಷ ರೂಪಾಯಿವರೆಗೆ ತೆರಿಗೆ ರಿಯಾಯಿತಿ ಸಿಗುತ್ತದೆ. ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ, ಬ್ಯಾಂಕುಗಳಿಂದ ಸಾಲ ಪಡೆದಾಗ ಮಾತ್ರ ವಿನಾಯಿತಿ ಲಭ್ಯವಿದೆ. ಕುಟುಂಬದಿಂದ ಸಾಲ ತೆಗೆದುಕೊಳ್ಳುವಾಗ ನಿಮಗೆ ಈ ವಿನಾಯಿತಿ ಸಿಗುವುದಿಲ್ಲ.
ಮನೆಯ ಪುನಃರ್ನಿರ್ಮಾಣ ಮತ್ತು ದುರಸ್ತಿಗಾಗಿ ಸ್ನೇಹಿತರು ಮತ್ತು ಕುಟುಂಬದಿಂದ ಸಾಲ ತೆಗೆದುಕೊಳ್ಳಬಹುದು. ಇದರ ಮೇಲೆ ನಿಮಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ ಕೇವಲ 30,000 ರೂಪಾಯಿ ವಿನಾಯಿತಿ ಸಿಗುತ್ತದೆ.
ಸೆಕ್ಷನ್ 24 ರ ಅಡಿಯಲ್ಲಿ ಬಡ್ಡಿಗೆ ವಿನಾಯಿತಿ ಸಿಗುತ್ತದೆ. ಇದಕ್ಕಾಗಿ ಗೃಹ ಸಾಲವನ್ನು ನೀಡಿದ ವ್ಯಕ್ತಿ ಪ್ರಮಾಣ ಪತ್ರವನ್ನು ನೀಡಬೇಕು. ವರ್ಷದಲ್ಲಿ ಎಷ್ಟು ಬಡ್ಡಿ ಪಾವತಿಸಿದ್ದೀರಿ ಎಂದು ಪ್ರಮಾಣ ಪತ್ರದಲ್ಲಿ ಹೇಳಬೇಕು. ಆದಾಯ ತೆರಿಗೆ ವಿನಾಯಿತಿ ಸಮಯದಲ್ಲಿ ಈ ಪ್ರಮಾಣ ಪತ್ರವನ್ನು ಪುರಾವೆಯಾಗಿ ತೋರಿಸಬೇಕು. ಆಗ ಮಾತ್ರ ತೆರಿಗೆ ರಿಯಾಯಿತಿ ಸಿಗುತ್ತದೆ.