ಕೃಷಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಮೂರು ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳು ರೈತ ವಿರೋಧಿಯಾಗಿವೆ ಎಂದು ರೈತರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಸಂಸತ್‌ನಲ್ಲಿ ಈ ಕಾಯ್ದೆಗಳ ಬಿಲ್ ಪಾಸ್ ಆಗಿಯೇ ಬಿಟ್ಟವು.
ಇಂದಿಗೂ ಇದನ್ನು ರೈತರು, ರೈತ ಮುಖಂಡರು ವಿರೋಧ ಮಾಡುತ್ತಲೇ ಇದ್ದಾರೆ. ಇದರ ಮಧ್ಯೆ ಈ ಕಾಯ್ದೆಗಳಿಂದ ಅನೇಕ ಅನುಕೂಲಗಳಿವೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ದೇಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳು ರೈತರಿಗೆ ಅನುಕೂಲ ಮಾಡಿಕೊಡುತ್ತವೆ. ಇದರಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಮಧ್ಯವರ್ತಿಗಳಿಂದ ರೈತರನ್ನು ಕಾಪಾಡುವ ಕೆಲಸ ಆಗಬೇಕಿದೆ. ಈ ಕಾಯ್ದೆಗಳಿಂದ ಅದು ನೆರವೇರುತ್ತದೆ. ರೈತರು ತಾವು ಬೆಳೆದ ಬೆಲೆಗೆ ತಾವೇ ಬೆಲೆ ನಿಗದ ಮಾಡುವಂತಹ ಕಾಯ್ದೆ ಇದಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ರೈತರ ಬೆಳೆಗಳಿಗೆ ನೀಡಿರುವ ಕನಿಷ್ಠ ಬೆಂಬಲ ಬೆಲೆ ಇನ್ನೂ ಮುಂದೆಯೂ ಇರಲಿದೆ. ಇದನ್ನು ವಾಪಸ್ ಪಡೆಯುವ ಯಾವುದೇ ಚಿಂತನೆ ನಮಗಿಲ್ಲ. ಆದರೆ ರೈತರ ಬೆಳೆಗಳಿಗೆ ಅವರೇ ದರ ನಿಗದಿ ಮಾಡುವುದರಿಂದ ಹೆಚ್ಚಿನ ಲಾಭ ಅವರಿಗೆ ಆಗುತ್ತದೆ. ಒಂದು ದೇಶ ಒಂದು ಮಾರುಕಟ್ಟೆಯತ್ತ ಇಡೀ ದೇಶ ಸಾಗುತ್ತಿದೆ ಎಂದರು.