ಸಕಾಲಕ್ಕೆ ವೇತನ ನೀಡದ ಹಿನ್ನೆಲೆಯಲ್ಲಿ ಕೋಲಾರದ ನರಸಾಪುರ ಘಟಕದಲ್ಲಿರುವ ವಿಸ್ಟ್ರಾನ್ ಕಂಪನಿ, ಕಾರ್ಮಿಕರ ಆಕ್ರೋಶಕ್ಕೆ ತುತ್ತಾಗಿತ್ತು. ಅಲ್ಲದೆ ಪ್ರತಿಭಟನೆಯ ವೇಳೆ ಕಂಪನಿಯ ಕೋಟ್ಯಾಂತರ ಮೌಲ್ಯದ ಆಸ್ತಿಪಾಸ್ತಿಗೆ ನಷ್ಟವುಂಟಾಗಿದೆ ಎಂದು ಪೊಲೀಸರಿಗೆ ದೂರು ಸಹ ನೀಡಲಾಗಿತ್ತು.
ಇದರ ಮಧ್ಯೆ ಆಪಲ್ ಕಂಪನಿ, ವಿಸ್ಟ್ರಾನ್ ಕಂಪನಿ ತನ್ನ ತಪ್ಪು ತಿದ್ದಿಕೊಳ್ಳುವವರೆಗೆ ಯಾವುದೇ ರೀತಿಯ ಹೊಸ ಗುತ್ತಿಗೆ ನೀಡುವುದಿಲ್ಲವೆಂದು ಘೋಷಿಸಿದ್ದು, ಜೊತೆಗೆ ಮೇಲ್ನೋಟಕ್ಕೆ ವಿಸ್ಟ್ರಾನ್ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ತಿಳಿಸಿತ್ತು.
ಈ ಎಲ್ಲ ಬೆಳವಣಿಗೆಗಳ ಬಳಿಕ ಎಚ್ಚೆತ್ತುಕೊಂಡಿರುವ ವಿಸ್ಟ್ರಾನ್ ಕಂಪನಿ, ಭಾರತದಲ್ಲಿ ಸಂಸ್ಥೆಯ ಉಸ್ತುವಾರಿ ವಹಿಸಿದ್ದ ಉಪಾಧ್ಯಕ್ಷರನ್ನು ವಜಾ ಮಾಡಿದೆ. ಅಲ್ಲದೆ ಕಾರ್ಮಿಕರ ಕ್ಷಮೆ ಕೋರಿದ್ದು, ತಕ್ಷಣ ಪರಿಹಾರ ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.