ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾಯಿಸುವ ಜನಪ್ರಿಯ ವಿಧಾನ ಆರ್.ಟಿ.ಜಿ.ಎಸ್. ಸೌಲಭ್ಯ ಡಿಸೆಂಬರ್ ನಿಂದ ವಾರದ ಎಲ್ಲ ದಿನಗಳಲ್ಲಿ 24 ಗಂಟೆಗಳ ಕಾಲ ಲಭ್ಯವಿರಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ವರ್ಷ ಡಿಸೆಂಬರ್‌ನಿಂದ ಸಣ್ಣ ಪ್ರಮಾಣದ ಹಣ ವರ್ಗಾವಣೆ ‘ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್’ (ಎನ್‌ಇಎಫ್‌ಟಿ) ವ್ಯವಸ್ಥೆಯ ಆನ್‌ಲೈನ್ ಪಾವತಿ ಸೌಲಭ್ಯವನ್ನು 24 ಗಂಟೆಗಳ ಕಾಲ ಲಭ್ಯ ಮಾಡಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕ ನಂತ್ರ ಈಗ ಆರ್.ಟಿ.ಜಿ.ಎಸ್. ವ್ಯವಸ್ಥೆಯನ್ನು 24 ಗಂಟೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಸಿಸ್ಟಮ್ (ಆರ್.ಟಿ.ಜಿ.ಎಸ್.) 24 ಗಂಟೆಗಳ ಕಾಲ ಕೆಲಸ ನಿರ್ವಹಿಸಲಿದೆ. ದೊಡ್ಡ ಮೊತ್ತದ ಹಣ ವರ್ಗಾವಣೆಗೆ ದಿನದ 24 ಗಂಟೆ ಕಾರ್ಯನಿರ್ವಹಿಸುವ ದೇಶಗಳ ಪಟ್ಟಿಯಲ್ಲಿ ಈಗ ಭಾರತ ಸೇರಲಿದೆ. ಈ ಸೌಲಭ್ಯವು ಡಿಸೆಂಬರ್ 2020ರಿಂದ ಜಾರಿಗೆ ಬರಲಿದೆ. ಪ್ರಸ್ತುತ, ಆರ್‌ಟಿಜಿಎಸ್ ಸೌಲಭ್ಯ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಲಭ್ಯವಿದೆ. ಈ ಸೌಲಭ್ಯವು ಭಾನುವಾರ ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಲಭ್ಯವಿರುವುದಿಲ್ಲ. ಆರ್‌ಟಿಜಿಎಸ್ ಅಡಿಯಲ್ಲಿ ಕನಿಷ್ಠ ಎರಡು ಲಕ್ಷ ರೂಪಾಯಿಗಳನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಬಹುದು, ಆದರೆ ಇದಕ್ಕೆ ಗರಿಷ್ಠ ಮಿತಿಯಿಲ್ಲ.