ನವದೆಹಲಿ: ಆರ್ಟಿಓ ಕಚೇರಿಗೆ ಹೋಗದೆ ಡಿಎಲ್ ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದಿಂದ ಚಾಲನಾ ಪರವಾನಗಿ ಕ್ರಮಗಳ ಸುಧಾರಣೆ ಮಾಡಿದ್ದು, ಆರ್ಟಿಓ ಕಚೇರಿಗೆ ಹೋಗಿ ದಿನಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಮಧ್ಯವರ್ತಿಯನ್ನು ಸಂಪರ್ಕಿಸಬೇಕಿಲ್ಲ. ಮನೆಯಲ್ಲೇ ಕುಳಿತುಕೊಂಡು ಡಿಎಲ್ ಪಡೆದುಕೊಳ್ಳಬಹುದಾಗಿದೆ. ಜುಲೈ 1 ರಿಂದಲೇ ದೇಶಾದ್ಯಂತ ಈ ನಿಯಮ ಜಾರಿಗೆ ಬರಲಿದೆ.
ಖಾಸಗಿ ತರಬೇತಿ ಕೇಂದ್ರದವರು ಡ್ರೈವಿಂಗ್ ಲೈಸೆನ್ಸ್ ನೀಡಬಹುದು. ಡಿಎಲ್ ಪಡೆದುಕೊಳ್ಳಲು ಆರ್ಟಿಒ ಕಚೇರಿಗೆ ಹೋಗಿ ಪರೀಕ್ಷೆ ಕೊಡಬೇಕಿಲ್ಲ. ಹೊಸ ನಿಯಮದಡಿ ತರಬೇತಿ, ಪರೀಕ್ಷೆ ಮತ್ತು ಪಾಸಾಗುವ ವಿಧಾನಗಳನ್ನು ದಾಖಲಿಸಲಾಗುತ್ತದೆ. ಮಾನವ ರಹಿತ ಪ್ರಕ್ರಿಯೆ ನಡೆಯುತ್ತದೆ ಎನ್ನಲಾಗಿದೆ.
ಮಾನ್ಯತೆ ಹೊಂದಿದ ಸಂಸ್ಥೆಗಳು ಸರ್ಕಾರದ ನಿಯಮದಂತೆ ತರಬೇತಿ ನೀಡಿ ಪರೀಕ್ಷೆ ಪಾಸ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಡ್ರೈವಿಂಗ್ ಟ್ರ್ಯಾಕ್, ಬಯೋಮೆಟ್ರಿಕ್, ತಂತ್ರಜ್ಞಾನ ವ್ಯವಸ್ಥೆ ಹೊಂದಿದ ಖಾಸಗಿ ಸಂಸ್ಥೆಗಳು ಡಿಎಲ್ ನೀಡಲಿವೆ. ಖಾಸಗಿಯವರಿಂದ ಚಾಲನಾ ಪರವಾನಿಗೆ ಪಡೆಯಲು ಯಾವುದೇ ಅಡ್ಡದಾರಿಗೆ ಅವಕಾಶವಿಲ್ಲ. ಏಕೆಂದರೆ ಪರೀಕ್ಷೆ, ತರಬೇತಿ ಸೇರಿ ಎಲ್ಲವೂ ಎಲೆಕ್ಟ್ರಾನಿಕ್ ವಿಧಾನದಲ್ಲಿ ದಾಖಲಾಗಲಿದೆ. ಇದನ್ನು ಸರ್ಕಾರದಿಂದ ಆಡಿಟ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಇದರಿಂದ ಅನುಕೂಲವಾದಷ್ಟು ಅನಾನುಕೂಲವಾಗುವ ಸಾಧ್ಯತೆಗಳೂ ಇವೆ. ಪರವಾನಗಿ ಶುಲ್ಕ ಹೆಚ್ಚಾಗಬಹುದು. ತರಬೇತಿಯೊಂದಿಗೆ ಲೈಸೆನ್ಸ್ ನೀಡಲು ಹೆಚ್ಚಿನ ಹಣ ಪಡೆಯಬಹುದು. ಖಾಸಗಿ ಸಂಸ್ಥೆಗಳಿಗೆ ಡ್ರೈವಿಂಗ್ ಟ್ರ್ಯಾಕ್ ಗೆ ಕೆಲಸ ಹೊಂದಿಸುವುದು ಕಷ್ಟವಾಗಬಹುದು ಎನ್ನಲಾಗಿದೆ.