ಇತ್ತೀಚೆಗಷ್ಟೆ ಇಂಡೋ ಚೀನಾ ಗಡಿ ಸಂಘರ್ಷ, ದೇಶದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ಚೀನಾ ಆಪ್ಗಳ ನಿಷೇಧ ಕೂಡ ಒಂದು. ಅದರಲ್ಲೂ ಭಾರತೀಯರು ಹೆಚ್ಚಾಗಿ ಬಳಸುತ್ತಿದ್ದ ಚೀನಾ ಆಪ್ ಅಂದರೆ ಅದು ಟಿಕ್ ಟಾಕ್. ಈ ಆಪ್ ಕೂಡ ಬ್ಯಾನ್ ಆಗಿದೆ. ಹೀಗಾಗಿ ಟಿಕ್ ಟಾಕ್ ಕಂಪನಿಗೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗುತ್ತಿದೆ. ಇನ್ನು ಭಾರತದಲ್ಲಿ ಟಿಕ್ ಟಾಕ್ ನಿಷೇಧದ ಬಳಿಕ ಇದೀಗ ಅಮೆರಿಕದಲ್ಲೂ ಟಿಕ್ ಟಾಕ್ ಅನ್ನು ನಿಷೇಧಿಸಬೇಕೆಂಬ ಕೂಗು ಹೆಚ್ಚಾಗುತ್ತಿದೆ.
ಇದು ಟಿಕ್ ಟಾಕ್ನ ಮೂಲ ಕಂಪನಿ ಬೈಟ್ ಡ್ಯಾನ್ಸ್ಗೆ ಅರಗಿಸಿಕೊಳ್ಳದ ವಿಚಾರವೇ. ಈಗಾಗಲೇ ಒಂದು ದೇಶದಲ್ಲಿ ಈ ಆಪ್ ನಿಷೇಧಗೊಂಡು ಅದರ ನಷ್ಟ ಅನುಭವಿಸುವ ಬೆನ್ನಲ್ಲೇ ಇದೀಗ ಮತ್ತೊಂದು ದೇಶದಲ್ಲಿ ಆಪ್ ನಿಷೇಧಗೊಂಡರೆ ಹೇಗೆ ಎಂದು ಯೋಚನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಟಿಕ್ ಟಾಕ್ಗಾಗಿ ಪ್ರತ್ಯೇಕ ನಿರ್ವಹಣಾ ಮಂಡಳಿಯನ್ನು ರಚಿಸಿ ಅದರ ಪ್ರಧಾನ ಕಛೇರಿಯನ್ನು ಚೀನಾದಿಂದ ಹೊರಗೆ ಸ್ಥಾಪಿಸಲು ಚಿಂತನೆ ನಡೆಸಿದೆ ಬೈಟ್ ಡ್ಯಾನ್ಸ್ ಮ್ಯಾನೇಜ್ಮೆಂಟ್ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಟಿಕ್ ಟಾಕ್ ಸುಮಾರು 20 ಕೋಟಿ ಅಧಿಕೃತ ಬಳಕೆದಾರರನ್ನು ಹೊಂದಿದೆ. ಈಗಾಗಲೇ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿರುವ ಕಂಪನಿ ಮುಂದೆ ಅಮೆರಿಕಾದಲ್ಲೂ ಬ್ಯಾನ್ ಆದರೆ ಮತ್ತೊಂದು ದೊಡ್ಡ ನಷ್ಟ ಉಂಟಾಗಲಿದೆ. ಹೀಗಾಗಿ ಇಂತಹದೊಂದು ನಿರ್ಧಾರಕ್ಕೆ ಬೈಟ್ಡ್ಯಾನ್ಸ್ ಮ್ಯಾನೇಜ್ಮೆಂಟ್ ಬಂದಿದೆ ಎನ್ನಲಾಗುತ್ತಿದೆ.