ಭಾರತೀಯರಿಗೆ ಹಳದಿ ಲೋಹದ ಚಿನ್ನದ ಮೇಲೆ ಅಪಾರ ವ್ಯಾಮೋಹ. ಕಷ್ಟಕಾಲದಲ್ಲಿ ನಮ್ಮ ನೆರವಿಗೆ ಬರಲಿದೆ ಎಂಬ ಕಾರಣಕ್ಕಾಗಿ ಚಿನ್ನ ಖರೀದಿಗೆ ಮುಂದಾಗುತ್ತಾರೆ. ಆದರೆ ಇದರ ಮಧ್ಯೆ ಬಂದ ಕೊರೊನಾ ಬಹಳಷ್ಟು ಜನರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತ್ತು.
ಮದುವೆ ಸೇರಿದಂತೆ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದವರು ಕೊರೊನಾ ಲಾಕ್ಡೌನ್ ಕಾರಣಕ್ಕೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕಾರಣ ತಮ್ಮ ಯೋಜನೆಯನ್ನು ಮುಂದೂಡಿಕೆ ಮಾಡಿದ್ದರು. ಇದೀಗ ಲಾಕ್ಡೌನ್ ಸಡಿಲಿಕೆಯಾಗಿದ್ದು ವ್ಯಾಪಾರ – ವಹಿವಾಟುಗಳು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇದರ ಜೊತೆಗೆ ಏರಿಕೆಯಾಗುತ್ತಿರುವ ಚಿನ್ನದ ಬೆಲೆಯೂ ಆಭರಣ ಪ್ರಿಯರನ್ನು ಕಂಗೆಡಿಸಿದೆ.
ಕಳೆದ ಹಲವು ದಿನಗಳಿಂದ ಚಿನ್ನದ ಬೆಲೆ ಏರುಮುಖ ಮಾಡಿದ್ದು ಗುರುವಾರದಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,200 ರೂಪಾಯಿ ತಲುಪಿತ್ತು. ಮರುದಿನ ಅಂದರೆ ಶುಕ್ರವಾರ ಇಳಿಕೆ ಕಂಡಿತಾದರೂ ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ದರ 60 ಸಾವಿರ ರೂಪಾಯಿ ತಲುಪಿದರೂ ಅಚ್ಚರಿಯಿಲ್ಲವೆಂದು ಹೇಳಲಾಗಿದೆ.