ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿಯ ಕೆಲಸಕ್ಕೆ ಕತ್ತರಿ ಬಿದ್ದಿದೆ. ಕೊರೊನಾದಿಂದಾಗಿ ಜೀವದ ಜೊತೆ ಜೀವನ ಕೂಡ ಬೀದಿಗೆ ಬಿದ್ದಂತಾಗಿದೆ. ಅತ್ತ ಕೆಲಸವೂ ಇಲ್ಲ, ಆದಾಯವೂ ಇಲ್ಲ. ಹೀಗಾಗಿ ಅನೇಕ ಮಂದಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇದರ ನಡುವೆ ಚಿನ್ನದ ಬೆಲೆ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ.
ಹೀಗಾಗಿ ಅನೇಕ ಮಂದಿ ಚಿನ್ನದ ಮೇಲೆ ಸಾಲ ಸೌಲಭ್ಯ ಪಡೆಯುತ್ತಿದ್ದಾರೆ. ಚಿನ್ನದ ಬೆಲೆ ಏರಿಕೆ ಬೆನ್ನಲ್ಲೇ ತಮ್ಮಲ್ಲಿರುವ ಚಿನ್ನವನ್ನು ಅಡಮಾನ ಇಡುವ ಪ್ರಕ್ರಿಯೆ ಹೆಚ್ಚಾಗಿದೆ. ಇತ್ತ ಅನೇಕ ಬ್ಯಾಂಕ್ಗಳು ಕೂಡ ಚಿನ್ನದ ಮೇಲೆ ಸಾಲ ನೀಡಲು ಮುಂದಾಗಿವೆ. ಇನ್ನು ಚಿನ್ನದ ಮೌಲ್ಯದ 75 ಪರ್ಸೆಂಟ್ಗಿಂತ ಹೆಚ್ಚು ಸಾಲ ನೀಡುತ್ತಿಲ್ಲ.
ಇತ್ತ ಒಂದಿಷ್ಟು ಬ್ಯಾಂಕ್ ಹಾಗೂ ಸಂಸ್ಥೆಗಳು ಗ್ರಾಹಕರ ಮನೆ ಬಾಗಿಲಿಗೆ ಹೋಗಿ ಚಿನ್ನದ ಮೇಲೆ ಸಾಲ ನೀಡುತ್ತಿವೆ. ಖಾಸಗಿ ಹಣಕಾಸು ಸಂಸ್ಥೆಗಳು ಕೂಡ ಚಿನ್ನದ ಮೇಲೆ ಸಾಲ ನೀಡಲು ಪೈಪೋಟಿಗೆ ಇಳಿದಿವೆ.