ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ಅಪಾರ ವ್ಯಾಮೋಹ. ಕಷ್ಟಕಾಲದಲ್ಲಿ ಆಪದ್ಧನವಾಗುತ್ತದೆ ಎಂಬ ನಂಬಿಕೆಯೂ ಚಿನ್ನ ಖರೀದಿಗೆ ಮತ್ತೊಂದು ಪ್ರಮುಖ ಕಾರಣ. ಇದೀಗ ಚಿನ್ನದ ದರ ಮುಗಿಲು ಮುಟ್ಟಿದ್ದು, ಆಭರಣ ಪ್ರಿಯರಿಗೆ ಶಾಕ್ ನೀಡಿದೆ.
10 ಗ್ರಾಂ ಚಿನ್ನದ ಬೆಲೆ 47,900 ರೂಪಾಯಿಗಳಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಮೂಲಕ 50 ಸಾವಿರ ರೂಪಾಯಿ ತಲುಪಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ. ಚಿನ್ನದ ಬೆಲೆ ಏರಿಕೆಗೆ ಕಳೆದ ಎರಡು ತಿಂಗಳಿಂದ ಆಮದು ಪ್ರಮಾಣ ಶೂನ್ಯವಾಗಿರುವುದೇ ಕಾರಣವೆಂದು ಹೇಳಲಾಗಿದೆ.
ಮಾರ್ಚ್ 23 ರಿಂದ ಚಿನ್ನಾಭರಣ ಮಳಿಗೆಗಳನ್ನು ಮುಚ್ಚಲಾಗಿದ್ದು, ಲಾಕ್ಡೌನ್ ಸಡಿಲಿಕೆ ಬಳಿಕ ವಹಿವಾಟು ಆರಂಭವಾಗಿದೆ. ಚಿನ್ನದ ಮೇಲಿನ ಬೇಡಿಕೆಯೂ ಹೆಚ್ಚಾಗಿದ್ದು, ಆದರೆ ಆಮದು ಇಲ್ಲವಾದ ಕಾರಣ ದಾಸ್ತಾನು ಇರುವ ಚಿನ್ನವನ್ನಷ್ಟೇ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಸಹಜವಾಗಿಯೇ ಈ ಅಂಶ ಬೆಲೆಯೇರಿಕೆಗೆ ಕಾರಣವಾಗಿದೆ.