ದೇಶದ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ, 10 ಸಾವಿರಕ್ಕಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡಲು ಒಟಿಪಿ ನೀಡಬೇಕು. ಒಟಿಪಿ ಇಲ್ಲದೆ ಹಣ ವಿತ್ ಡ್ರಾ ಮಾಡಲು ಸಾಧ್ಯವಿಲ್ಲ.
ಸ್ಟೇಟ್ ಬ್ಯಾಂಕ್ ಈಗಾಗಲೇ ಈ ನಿಯಮವನ್ನು ಜಾರಿಗೆ ತಂದಿದೆ. ಸೆಪ್ಟೆಂಬರ್ 18 ರಿಂದ ಇದನ್ನು 24 ಗಂಟೆಗಳ ಕಾಲ ಜಾರಿಗೆ ತರಲಾಗಿದೆ. ಈ ಮೊದಲು, ಎಸ್‌ಬಿಐ ಅಕ್ಟೋಬರ್ 1 ರಿಂದ ವಿದೇಶಕ್ಕೆ ಹಣ ಕಳುಹಿಸುವ ನಿಯಮಗಳನ್ನು ಬದಲಾಯಿಸಿದೆ. ಈಗ ಗ್ರಾಹಕರು ವಿದೇಶದಲ್ಲಿ ನಡೆಯುವ ವ್ಯವಹಾರಗಳಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ, ಗ್ರಾಹಕರು ವಿದೇಶಕ್ಕೆ ಹಣವನ್ನು ಕಳುಹಿಸಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಎಸ್‌ಬಿಐ ಈ ಹೊಸ ನಿಯಮದ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಎಸ್‌ಬಿಐ ಟ್ವೀಟ್ ಪ್ರಕಾರ, ಇಂದಿನಿಂದ ಒನ್ ಟೈಮ್ ಪಾಸ್ವರ್ಡ್ ಆಧಾರಿತ ಎಟಿಎಂ ನಗದು ಹಿಂಪಡೆಯುವ ಸೌಲಭ್ಯವನ್ನು 24 ಗಂಟೆಗಳ ಕಾಲ ಜಾರಿಗೆ ತರಲು ನಿರ್ಧರಿಸಿದೆ. ಈ ಹಿಂದೆ ಈ ನಿಯಮ ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೆ ಜಾರಿಯಲ್ಲಿತ್ತು. ಹಣ ನಮೋದಿಸಿದ ನಂತ್ರ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದ ನಂತ್ರವೇ ಹಣ ವಿತ್ ಡ್ರಾ ಮಾಡಬಹುದಾಗಿದೆ. ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಈಗ ಮೊಬೈಲ್ ಅನಿವಾರ್ಯವಾಗಿದೆ.