ಕೇಂದ್ರ ಸರ್ಕಾರ ವೇತನಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಸುದ್ದಿ ಸಂಸ್ಥೆ ಪಿಟಿಐಗೆ ದೊರೆತ ಮಾಹಿತಿಯ ಪ್ರಕಾರ ವೇತನ ಸಂಹಿತೆ 2019 ಸೆಪ್ಟೆಂಬರ್ ವೇಳೆಗೆ ಜಾರಿಗೆ ಬರಲಿದೆ. ವಲಯ ಮತ್ತು ವೇತನ ಶ್ರೇಣಿಯನ್ನು ಲೆಕ್ಕಿಸದೆ ವೇತನ ಸಂಹಿತೆಯು ಕನಿಷ್ಟ ವೇತನ ಮತ್ತು ಎಲ್ಲಾ ಉದ್ಯೋಗಿಗಳಿಗೆ ಸಮಯೋಚಿತವಾಗಿ ಪಾವತಿಸುವ ಅವಕಾಶವನ್ನು ಒಳಗೊಂಡಿದೆ.
ಸಂಬಳ ವಿಳಂಬಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಇದರ ಉದ್ದೇಶ. ಇದು ಜಾರಿಗೆ ಬಂದ್ಮೇಲೆ ಸಂಬಳ ಪಾವತಿಸುವಲ್ಲಿ ಯಾವುದೇ ತಾರತಮ್ಯ ಕಾಡುವುದಿಲ್ಲ ಎನ್ನಲಾಗ್ತಿದೆ. ಕೇಂದ್ರ ಕಾರ್ಮಿಕ ಸಚಿವಾಲಯವು ಜುಲೈ 7 ರಂದು ಹೊರಡಿಸಿದ ಕರಡು ನಿಯಮಗಳನ್ನು ಅಧಿಕೃತ ಗ್ಯಾಜೆಟ್‌ನಲ್ಲಿ ಇರಿಸಿದೆ. ಇದು 45 ದಿನಗಳವರೆಗೆ ಸಾರ್ವಜನಿಕ ಪ್ರತಿಕ್ರಿಯೆಗಾಗಿ ತೆರೆದಿರುತ್ತದೆ. ಯಾವುದೇ ಸಮಸ್ಯೆಗಳಿಲ್ಲದಿದ್ದರೆ ಅದನ್ನು ಕಾರ್ಯಗತಗೊಳಿಸಲಾಗುತ್ತದೆ.
ಈ ಸಂಹಿತೆಯನ್ನು ಕಳೆದ ವರ್ಷ ಸಂಸತ್ತು ಅಂಗೀಕರಿಸಿತ್ತು. ಹೊಸ ವೇತನ ಸಂಹಿತೆಯಿಂದ ದೇಶದ ಸುಮಾರು 50 ಕೋಟಿ ಕಾರ್ಮಿಕರು ಲಾಭ ಪಡೆಯುವ ನಿರೀಕ್ಷೆಯಿದೆ.