ಕೊರೊನಾ ಸಂಕಷ್ಟದ ಜೊತೆಗೆ ಬೆಲೆ ಏರಿಕೆಗಳು ಗ್ರಾಹಕರ ಕೈ ಸುಡುತ್ತಿವೆ. ಇತ್ತ ತೈಲ ಬೆಲೆ ಏರಿಕೆ ಬಿಸಿ ರೈತರಿಗೂ ತಟ್ಟಿದೆ. ಬೆಲೆ ಏರಿಕೆಯಿಂದ ರೈತಾಪಿ ವರ್ಗದ ಜನ ಕಂಗಾಲಾಗಿದ್ದಾರೆ. ತೈಲ ಬೆಲೆ ಏರಿಕೆಯ ಎಫೆಕ್ಟ್ ಕೃಷಿ ಯಂತ್ರೋಪಕರಣಗಳಿಗೂ ತಟ್ಟಿರೋದ್ರಿಂದ ಯಾಂತ್ರಿಕ ಬೇಸಾಯ ಮಾಡಿಸುವ ರೈತರ ಜೇಬಿಗೆ ಕತ್ತರಿ ಹಾಕಿದೆ.
ಹೌದು, ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 81.43 ರೂಪಾಯಿಯಾಗಿದೆ. ದಿನನಿತ್ಯ ತೈಲ ಬೆಲೆ ಪರಿಷ್ಕರಣೆ ಹಿನ್ನೆಲೆ ಇಂದು ಪೆಟ್ರೋಲ್ ಬೆಲೆಯಲ್ಲಿ 51 ಪೈಸೆ ಏರಿಕೆ ಕಂಡಿದೆ. ಜೂನ್ 6 ರಿಂದ ಇಲ್ಲಿಯತನಕ ಪೆಟ್ರೋಲ್ ಬೆಲೆಯಲ್ಲಿ 6.24 ಪೈಸೆ ಏರಿಕೆ ಆಗಿದೆ. ಡೀಸೆಲ್ ಬೆಲೆ ಬೆಂಗಳೂರಿನಲ್ಲಿ ಪ್ರಸ್ತುತ 73.26 ರೂಪಾಯಿ ಇದೆ.
ಇತ್ತ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಯಂತ್ರೋಪಕರಣಗಳ ಬಾಡಿಗೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ರೈತರಿಗೆ ಯಾಂತ್ರಿಕ ಬೇಸಾಯ ಕೈ ಸುಡುತ್ತಿದೆ. ಕೊರೊನಾದಿಂದಾಗಿ ಫಸಲನ್ನು ಸರಿಯಾಗಿ ಮಾರಾಟ ಮಾಡದೇ ಪರದಾಡುವ ಸ್ಥಿತಿ ಒಂದೆಡೆಯಾದರೆ, ಇತ್ತ ಯಾಂತ್ರಿಕ ಬೇಸಾಯ ಬೆಲೆ ಹೆಚ್ಚಳ ರೈತರನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿದೆ.