ದೇಶದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಇದರ ನಿಯಂತ್ರಣಕ್ಕಾಗಿ ತಿಂಗಳಾನುಗಟ್ಟಲೆ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು.ಇದು ಬಹುತೇಕ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಅದರಲ್ಲೂ ಕೊರೊನಾ ಕಾಡುವ ಮುನ್ನವೇ ಸಂಕಷ್ಟ ಎದುರಿಸುತ್ತಿದ್ದ ವಾಹನೋದ್ಯಮ ಮತ್ತಷ್ಟು ಪಾತಾಳಕ್ಕೆ ಕುಸಿದಿತ್ತು.
ದೇಶಕ್ಕೆ ಕೊರೊನಾ ಕಾಲಿಡುವ ಮುನ್ನ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ವಾಹನೋದ್ಯಮ ವೆಚ್ಚ ನಿಯಂತ್ರಣಕ್ಕಾಗಿ ಸಿಬ್ಬಂದಿ ಕಡಿತ, ಹೊಸ ನೇಮಕಾತಿ ಸ್ಥಗಿತ ಮೊದಲಾದ ಕ್ರಮಗಳನ್ನು ಕೈಗೊಂಡಿತ್ತು. ಕೊರೊನಾ ಲಾಕ್ಡೌನ್ ಮತ್ತಷ್ಟು ಪರಿಣಾಮ ಬೀರಿದ್ದರಿಂದ ಇನ್ನಷ್ಟು ಉದ್ಯೋಗಿಗಳು ಬೀದಿಗೆ ಬಂದಿದ್ದಾರೆ ಎಂದು ಊಹಿಸಲಾಗಿತ್ತು.
ಆದರೆ ಅಚ್ಚರಿಯೆಂಬಂತೆ ಲಾಕ್ಡೌನ್ ಸಡಿಲಿಕೆ ಬಳಿಕ ವಾಹನೋದ್ಯಮ ಚೇತರಿಸಿಕೊಂಡಿದ್ದು, ಹೀಗಾಗಿ ಕಂಪನಿಗಳು ಯಾವುದೇ ಸಿಬ್ಬಂದಿ ಕಡಿತ ಮಾಡುವುದಿಲ್ಲ ಎಂದು ತಿಳಿಸಿವೆ. ಅಷ್ಟೇ ಅಲ್ಲ ಸಿಬ್ಬಂದಿಗೆ ಬೋನಸ್ ಮತ್ತು ಇನ್ಸೆಂಟಿವ್ ನೀಡಲು ಕೆಲ ಕಂಪನಿಗಳು ಮುಂದಾಗಿವೆ. ಕೊರೊನಾ ಭಯದಿಂದ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಲು ಜನತೆ ಹಿಂದೇಟು ಹಾಕುತ್ತಿರುವ ಕಾರಣ ಸ್ವಂತ ವಾಹನ ಖರೀದಿಗೆ ಮುಂದಾಗುತ್ತಿರುವುದು ವಾಹನೋದ್ಯಮ ಚೇತರಿಸಿಕೊಳ್ಳಲು ಕಾರಣವೆಂದು ಹೇಳಲಾಗಿದೆ.