ಕೊರೊನಾ ಮಹಾಮಾರಿ ಮನುಕುಲವನ್ನು ನಲುಗುವಂತೆ ಮಾಡಿದೆ. ಯಾವಾಗಪ್ಪ ನಾವೆಲ್ಲಾ ಕೊರೊನಾದಿಂದ ಮುಕ್ತ ಆಗುತ್ತೇವೆ ಅಂತಾ ಜನ ಕಾಯುತ್ತಿದ್ದಾರೆ. ಮಹಾಮಾರಿಯ ಆರ್ಭಟ ನಿಲ್ಲಿಸಲು ವೈದ್ಯರ ತಂಡ ಔಷಧ ಕಂಡು ಹಿಡಿಯುವಲ್ಲಿ ನಿರತವಾಗಿದೆ. ಇದರ ನಡುವೆ ಕೊರೊನಾಗೆ ಹೈದರಾಬಾದ್ ಮೂಲದ ಔಷಧಿ ತಯಾರಕ ಸಂಸ್ಥೆ ಲಸಿಕೆಯನ್ನು ಕಂಡು ಹಿಡಿದಿದೆ.
ಹೌದು, ಪ್ರಾಯೋಗಿಕ ಕೋವಿಡ್-19 ಔಷಧಿ ತಯಾರಿಸಲು ಮತ್ತು ಮಾರಾಟ ಮಾಡಲು ಹೈದರಾಬಾದ್ ಮೂಲದ ಔಷಧಿ ತಯಾರಕ ಹೆಟೆರೊ ಕಂಪನಿಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ ಇದೀಗ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಸದ್ಯ ಈ ಕಂಪನಿ ಮಹಾರಾಷ್ಟ್ರ ಮತ್ತು ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ 20,000 ಬಾಟಲುಗಳನ್ನು ಕಳುಹಿಸಿದೆ.
ಕೊವಿಫಾರ್ ಹೆಸರಲ್ಲಿ ಈ ಔಷಧ ಮಾರಾಟವಾಗುತ್ತಿದ್ದು, ಮೊದಲ ಬ್ಯಾಚ್‌ನ ಔಷಧ ಪಡೆಯುತ್ತಿವೆ ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳು. 100 ಮಿಲಿ ಮೀಟರ್ ಬಾಟಲ್‌ಗೆ 5,400 ರೂಪಾಯಿಗಳು. ಮುಂದಿನ ಬ್ಯಾಚ್ ಅನ್ನು ಕೋಲ್ಕತಾ, ಇಂದೋರ್, ಭೋಪಾಲ್, ಲಕ್ನೋ, ಪಾಟ್ನಾ, ಭುವನೇಶ್ವರ, ರಾಂಚಿ, ವಿಜಯವಾಡ, ಕೊಚ್ಚಿ, ತಿರುವನಂತಪುರ ಮತ್ತು ಗೋವಾಕ್ಕೆ ರವಾನಿಸಲಾಗುತ್ತಿದೆ. ಇನ್ನು ಮೂರು-ನಾಲ್ಕು ವಾರಗಳಲ್ಲಿ ಒಂದು ಲಕ್ಷ ಬಾಟಲುಗಳನ್ನು ಉತ್ಪಾದಿಸುವ ಗುರಿಯನ್ನು ಕಂಪನಿ ಹೊಂದಿದೆ.