ಈಗಿನ ಸಮಯದಲ್ಲಿ ವಿಮೆ ಅನಿವಾರ್ಯವಾಗಿದೆ. ಆದ್ರೆ ವಿಮೆ ಕಂತು ದುಬಾರಿಯಾಗಿರುವ ಕಾರಣ ಅನೇಕರು ವಿಮೆ ಮಾಡಲು ಹೆದರುತ್ತಾರೆ. ಇಂಥವರಿಗಾಗಿಯೇ ಕೇಂದ್ರ ಸರ್ಕಾರ ಎರಡು ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ಜನರಿಗಾಗಿ ಕೇಂದ್ರ ಸರ್ಕಾರ ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಜಾರಿಗೆ ತಂದಿದೆ.
ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಕೇಂದ್ರ ಸರ್ಕಾರದ ಜೀವ ವಿಮಾ ಯೋಜನೆಯಾದರೆ, ಸುರಕ್ಷಾ ಬಿಮಾ ಯೋಜನೆ ಅಪಘಾತ ವಿಮಾ ಯೋಜನೆಯಾಗಿದೆ. ಈ ಎರಡು ಯೋಜನೆಗಳು 4 ಲಕ್ಷ ರೂಪಾಯಿವರೆಗೆ ವಿಮೆ ಲಾಭ ನೀಡುತ್ತವೆ. ಈ ಎರಡೂ ಯೋಜನೆಗಳ ಲಾಭ ಪಡೆಯಲು ವಾರ್ಷಿಕವಾಗಿ ಕೇವಲ 342 ರೂಪಾಯಿಗಳನ್ನು ಪ್ರೀಮಿಯಂ ಆಗಿ ಪಾವತಿಸಬೇಕಾಗುತ್ತದೆ.
ಎರಡೂ ಯೋಜನೆಗಳು ವಾರ್ಷಿಕವಾಗಿವೆ. ಪ್ರೀಮಿಯಂ, ಪ್ರತಿ ವರ್ಷ ಮೇ-ಜೂನ್‌ನಲ್ಲಿ ಪಾವತಿಸಬೇಕಾಗುತ್ತದೆ. ಪ್ರೀಮಿಯಂ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ.
ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಕೇವಲ 12 ರೂಪಾಯಿಗಳಿಗೆ 2 ಲಕ್ಷ ರೂಪಾಯಿ ವಿಮೆ ಲಾಭ ಪಡೆಯಬಹುದು. ಇದು ಒಂದು ರೀತಿಯ ಅಪಘಾತ ವಿಮೆಯಾಗಿದೆ. ಅಪಘಾತದಲ್ಲಿ ಅಂಗವಿಕಲರಾದ್ರೆ ಅಥವಾ ಸಾವನ್ನಪ್ಪಿದ್ರೆ ವಿಮೆ ಲಾಭ ಪಡೆಯಬಹುದು. ಇದು ಒಂದು ವರ್ಷದ ವಿಮೆ. ಪ್ರತಿ ವರ್ಷ ನವೀಕರಿಸಬೇಕಾಗುತ್ತದೆ. ಸಾವು ಸಂಭವಿಸಿದ್ರೆ ಅಥವಾ ಪೂರ್ತಿ ವಿಕಲಾಂಗರಾದ್ರೆ 2 ಲಕ್ಷ ರೂಪಾಯಿ ಸಿಗುತ್ತದೆ. ಭಾಗಶಃ ವಿಕಲಾಂಗರಾದ್ರೆ 1 ಲಕ್ಷ ರೂಪಾಯಿ ಸಿಗುತ್ತದೆ.
18 ವರ್ಷದಿಂದ 70 ವರ್ಷ ವಯಸ್ಸಿನ ಯಾರಾದರೂ ಯೋಜನೆಯನ್ನು ತೆಗೆದುಕೊಳ್ಳಬಹುದು. ವಿಮಾದಾರನು 70 ವರ್ಷ ವಯಸ್ಸಿನವನಾಗಿದ್ದಾಗ ಈ ವಿಮೆ ಕೊನೆಗೊಳ್ಳುತ್ತದೆ. ಈ ಯೋಜನೆಗಾಗಿ ಬ್ಯಾಂಕಿನಲ್ಲಿ ಖಾತೆ ಇರುವುದು ಅವಶ್ಯಕ. ಬ್ಯಾಂಕ್ ಖಾತೆಯಿಂದ ಪ್ರೀಮಿಯಂ ಪಾವತಿಯಾಗುವ ಕಾರಣ ಬ್ಯಾಂಕ್ ಖಾತೆಯಲ್ಲಿ ಹಣವಿರಬೇಕು. ಬ್ಯಾಂಕ್ ಖಾತೆ ಮುಚ್ಚಿದರೆ ವಿಮೆ ಪಾಲಿಸಿ ರದ್ದಾಗುತ್ತದೆ. ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಿ ನೀವು ಪಾಲಿಸಿಗೆ ಅರ್ಜಿ ಸಲ್ಲಿಸಬಹುದು.