ಬಹಳಷ್ಟು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಆದರೆ ಅದರಲ್ಲಿ ವಹಿವಾಟು ನಡೆಸುವುದು ಯಾವುದಾದರೂ ಒಂದು ಬ್ಯಾಂಕಿನಲ್ಲಿ ಮಾತ್ರ. ಆದರೆ ಗ್ರಾಹಕರು ತಾವು ಹೊಂದಿದ್ದ ಇನ್ನೊಂದು ಖಾತೆ ವಹಿವಾಟಿಲ್ಲದೆ ನಿಷ್ಕ್ರಿಯಗೊಂಡಿದ್ದರೆ ಅದನ್ನು ಕ್ಲೋಸ್ ಮಾಡುವುದು ಸೂಕ್ತ. ಇಲ್ಲವಾದರೆ ಇದು ಗ್ರಾಹಕರಿಗೆ ಅನಗತ್ಯವಾಗಿ ಹೊರೆಯಾಗಿ ಪರಿಣಮಿಸುತ್ತದೆ.
ಬ್ಯಾಂಕುಗಳು, ಗ್ರಾಹಕರು ತಮ್ಮ ಖಾತೆಯಲ್ಲಿ ಇಂತಿಷ್ಟು ಹಣವನ್ನು ಇರಿಸಬೇಕೆಂಬ(ಮಿನಿಮಂ ಬ್ಯಾಲೆನ್ಸ್) ನಿಯಮವನ್ನು ಜಾರಿಗೆ ತಂದಿದ್ದು, ಒಂದು ವೇಳೆ ಅಷ್ಟು ಹಣ ನಿಮ್ಮ ಖಾತೆಯಲ್ಲಿರದಿದ್ದರೆ ಅದಕ್ಕೆ ದಂಡ ವಿಧಿಸುತ್ತ ಹೋಗಲಾಗುತ್ತದೆ. ವಿಳಂಬ ಮಾಡಿ ನೀವು ಇಂತಹ ಖಾತೆಯನ್ನು ಕ್ಲೋಸ್ ಮಾಡಲು ಹೋದರೆ ಭಾರೀ ದಂಡವನ್ನು ತೆರಬೇಕಾದ ಪರಿಸ್ಥಿತಿ ಬರಬಹುದು.
ಅಲ್ಲದೆ ಈಗ ಪ್ರತಿಯೊಂದು ಖಾತೆಯೂ ಆಧಾರ್ ಜೊತೆ ಲಿಂಕ್ ಆಗಿರುವುದರಿಂದ ಆದಾಯ ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿ ಗ್ರಾಹಕರು ತಾವು ಹೊಂದಿದ್ದ ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿ ನೀಡಬೇಕಾಗುತ್ತದೆ. ವಹಿವಾಟು ನಡೆಸುತ್ತಿಲ್ಲವೆಂದು ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವವರು ವಹಿವಾಟು ನಡೆಸದ ಖಾತೆಗಳನ್ನು ಬಂದ್ ಮಾಡುವುದು ಸೂಕ್ತ.