
ಕೊರೊನಾ ಲಾಕ್ಡೌನ್ ಕಾರಣಕ್ಕೆ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೆ ಉದ್ಯೋಗದ ನಿರೀಕ್ಷೆಯಲ್ಲಿದ್ದವರು ತಮಗೆ ಮುಂದಿನ ದಿನಗಳಲ್ಲಿ ಕೆಲಸ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದರು. ಇಂಥವರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ.
ಹೌದು, ದೇಶದಲ್ಲೇ ಮೊದಲ ಪ್ರಯೋಗವಾಗಿ ರಾಜ್ಯ ಸರ್ಕಾರದ ವತಿಯಿಂದ ಜುಲೈ 10ರಂದು ವರ್ಚುವಲ್ ಉದ್ಯೋಗ ಮೇಳ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಸಕಲ ಸಿದ್ದತೆ ನಡೆಸಲಾಗಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರು ಹಾಗೂ ಉದ್ಯೋಗದಾತರ ಅನುಕೂಲಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ಸ್ಥಾಪನೆ ಮಾಡಲಾಗಿದೆ.
https://skill connect.kaushalkar.com ಎಂಬ ಈ ವೆಬ್ ಸೈಟ್ ನಲ್ಲಿ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರು ನೋಂದಾಯಿಸಬೇಕಿದ್ದು, ಇದಕ್ಕೆ ಜುಲೈ 8 ಕೊನೆಯ ದಿನವಾಗಿದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವವರು ತಮಗಿರುವ ಕೌಶಲಗಳ ವಿವರ ದಾಖಲಿಸಬೇಕಿದ್ದು, ಉದ್ಯೋಗದಾತರು ತಮಗೆ ಅಗತ್ಯವಿರುವ ಹುದ್ದೆಗಳ ವಿವರ ನೀಡಬೇಕಾಗಿದೆ. ಆ ಬಳಿಕ ಇದಕ್ಕೆ ಅನುಗುಣವಾಗಿ ವರ್ಚುವಲ್ ಸಂದರ್ಶನ ನಡೆಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅದೇ ದಿನ ಮತ್ತೊಂದು ಸಂದರ್ಶನ ನೀಡಲು ಸಹ ವ್ಯವಸ್ಥೆ ಮಾಡಲಾಗುತ್ತದೆ.