ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಜಿ.ಎಸ್.ಟಿ. ಮಂಡಳಿ ಸಭೆ ಜೂನ್ 12ರ ನಾಳೆ ನಡೆಯಲಿದ್ದು, ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಭೆ ಮಹತ್ವ ಪಡೆದುಕೊಂಡಿದೆ.
ಲಾಕ್ ಡೌನ್ ಕಾರಣಕ್ಕೆ ಉದ್ಯಮ ವಲಯ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ಇದರ ಪುನಃಶ್ಚೇತನಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದರೂ ಸಹ ಮತ್ತಷ್ಟು ರಿಯಾಯಿತಿಯ ನಿರೀಕ್ಷೆಯಲ್ಲಿ ಉದ್ಯಮ ವಲಯವಿದೆ.
ನಾಳಿನ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ ಉದ್ಯಮ ವಲಯಕ್ಕೆ ರಿಯಾಯಿತಿ ಒದಗಿಸುವ ಕುರಿತು ಸಮಾಲೋಚನೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಜೊತೆಗೆ ರಾಜ್ಯಗಳಿಗೆ ತೆರಿಗೆ ನಷ್ಟ ಪರಿಹಾರ ನೀಡುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.