ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ಕೊರೊನಾ ಹೊಡೆತಕ್ಕೆ ತತ್ತರಿಸಿದ್ದು, ಪ್ರತಿನಿತ್ಯ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇದರ ಜೊತೆಗೆ ಕೆಲ ಜಿಲ್ಲೆಗಳಲ್ಲೂ ಕೊರೊನಾ ಅಬ್ಬರಿಸುತ್ತಿದೆ.
ಶನಿವಾರದಂದು ರಾಜ್ಯದಲ್ಲಿ 6955 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ ಬೆಂಗಳೂರು ನಗರ ಒಂದರಲ್ಲೇ 4384 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇನ್ನುಳಿದಂತೆ ಕೆಲ ಜಿಲ್ಲೆಗಳಲ್ಲಿ ನೂರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ಕಲಬುರ್ಗಿ 276, ಮೈಸೂರು 266, ಬೀದರ್ 215, ತುಮಕೂರು 206, ಬೆಂಗಳೂರು ಗ್ರಾಮಾಂತರ 152, ದಕ್ಷಿಣಕನ್ನಡ 137, ಕೋಲಾರ 121, ಮಂಡ್ಯ 119 ಹಾಗೂ ಹಾಸನದಲ್ಲಿ 100 ಪ್ರಕರಣಗಳು ವರದಿಯಾಗಿವೆ.
ಇಂದಿನಿಂದ ದೇಶದಾದ್ಯಂತ ನಾಲ್ಕು ದಿನಗಳ ಕಾಲ ‘ಲಸಿಕೆ ಉತ್ಸವ’
ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ, ಸೋಂಕು ವ್ಯಾಪಕವಾಗಿರುವ 8 ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಇದು ಶನಿವಾರ ರಾತ್ರಿಯಿಂದಲೇ ಜಾರಿಗೆ ಬಂದಿದೆ. ಏಪ್ರಿಲ್ 20ರ ವರೆಗೆ ಇದು ಮುಂದುವರೆಯಲಿದ್ದು, ಒಂದೊಮ್ಮೆ ಸೋಂಕು ತೀವ್ರವಾದರೆ ಇತರ ನಗರಗಳಿಗೂ ರಾತ್ರಿ ಕರ್ಫ್ಯೂ ವಿಸ್ತರಿಸುವ ಸಾಧ್ಯತೆ ಇದೆ.