ಕೊರೊನಾ ಸಂಕಷ್ಟದ ಮಧ್ಯೆಯೂ ಜನರು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಬಟ್ಟೆ, ಮನೆ, ಅಲಂಕಾರಿಕ ವಸ್ತುಗಳ ಜೊತೆ ಎಲೆಕ್ಟ್ರಾನಿಕ್ ಹಾಗೂ ವಾಹನ ಖರೀದಿಯಲ್ಲೂ ಜನರು ಆಸಕ್ತಿ ತೋರುತ್ತಿದ್ದಾರೆ. ಆದ್ರೆ ಹೊಸ ಕಾರಿನ ಬದಲು ಹಳೆ ಕಾರು ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆಂಬ ವಿಷ್ಯ ಹೊರಬಿದ್ದಿದೆ.
ಓಎಲ್ ಎಕ್ಸ್ ಆಟೋಸ್ ಇಂಡಿಯಾದ ಅಧ್ಯಯನದ ಪ್ರಕಾರ, ದೇಶದ ಜನರು ಹೊಸ ಕಾರುಗಿಂತ ಹಳೆಯ ಕಾರು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ. 2020 ರ ಆಗಸ್ಟ್ -.ಅಕ್ಟೋಬರ್ ಅವಧಿಯಲ್ಲಿ ಒಎಲ್ಎಕ್ಸ್ 5800 ಕಾರು ಖರೀದಿದಾರರು ಮತ್ತು ಮಾರಾಟಗಾರರೊಂದಿಗೆ ಈ ಸಮೀಕ್ಷೆಯನ್ನು ನಡೆಸಿದೆ. ಇದರಲ್ಲಿ ಹೆಚ್ಚಿನ ಜನರು ಹೊಸ ಕಾರುಗಳ ಬದಲು ಹಳೆಯ ಕಾರುಗಳನ್ನು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ.
ಕೊರೊನಾ ಅವಧಿಯಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರ ಸಂಬಳದಲ್ಲಿ ಕಡಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಹಬ್ಬದ ಋತುವಿನಲ್ಲಿ ಕಾರು ಖರೀದಿಸಲು ಬಯಸುತ್ತಿರುವುದು ಖುಷಿ ಸುದ್ದಿ. ಆದರೆ ಹೊಸ ಕಾರು ಖರೀದಿಗೆ ಬಜೆಟ್ ಸಾಲ್ತಿಲ್ಲ. ಹಾಗಾಗಿ ಹೊಸ ಕಾರುಗಳ ಬದಲು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುವ ಯೋಚನೆ ಮಾಡ್ತಿದ್ದಾರೆಂಬುದು ಅಧ್ಯಯನದಿಂದ ಗೊತ್ತಾಗಿದೆ.
ಸಮೀಕ್ಷೆಯ ಪ್ರಕಾರ, ಶೇಕಡಾ 61ರಷ್ಟು ಜನರು ಮುಂದಿನ 3-6 ತಿಂಗಳಲ್ಲಿ ಕಾರು ಖರೀದಿಸಲು ಸಿದ್ಧರಿದ್ದಾರೆ. ಶೇಕಡಾ 15ರಷ್ಟು ಜನರು ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಕಾರುಗಳನ್ನು ಮಾರಾಟ ಮಾಡಲು ಆಸಕ್ತಿ ಹೊಂದಿದ್ದಾರೆ. ಈ ಸಮೀಕ್ಷೆಯಲ್ಲಿ ಭಾಗವಹಿಸುವ ಶೇಕಡಾ 51ರಷ್ಟು ಜನರು ಸಂಬಳ ಪಡೆಯುವ ವರ್ಗದವರಾಗಿದ್ದರೆ ಶೇಕಡಾ 40ರಷ್ಟು ಮಂದಿ ಸ್ವಯಂ ಉದ್ಯೋಗಿಗಳಾಗಿದ್ದಾರೆ.