ಸತತ ಏರಿಕೆ ಕಾಣುವ ಮೂಲಕ ಖರೀದಿದಾರರನ್ನು ಕಂಗೆಡಿಸಿದ್ದ ಚಿನ್ನದ ದರ ಮಂಗಳವಾರದಂದು ಏಕಾಏಕಿ ಭಾರಿ ಇಳಿಕೆ ಕಾಣುವ ಮೂಲಕ ಮಂದಹಾಸ ಮೂಡಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ ಮಂಗಳವಾರ ಬರೋಬ್ಬರಿ 1,317 ರೂಪಾಯಿ ಇಳಿಕೆ ಕಂಡಿದೆ.
ಇದರಿಂದಾಗಿ 10 ಗ್ರಾಂ ಚಿನ್ನದ ಬೆಲೆ 54,763 ರೂಪಾಯಿ ತಲುಪಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಬಹುದೆಂಬ ಆಶಾಭಾವನೆ ಮೂಡಿಸಿದೆ. ಈ ಮೊದಲು ಚಿನ್ನದ ಬೆಲೆ 56 ಸಾವಿರ ರೂಪಾಯಿಗಳಿಗೆ ಏರಿಕೆಯಾಗಿದ್ದ ಕಾರಣ ಖರೀದಿದಾರರು ನಿರಾಸೆಗೊಂಡಿದ್ದರು.
ಮಂಗಳವಾರದಂದು ಬೆಳ್ಳಿ ಬೆಲೆಯಲ್ಲೂ ಸಹ 2,943 ರೂಪಾಯಿ ಇಳಿಕೆ ಕಂಡಿದ್ದು, ಈಗ ಕೆಜಿ ಬೆಳ್ಳಿ ಬೆಲೆ 73,600 ರೂಪಾಯಿಗೆ ತಲುಪಿದೆ. ಸುರಕ್ಷಿತ ಎನ್ನುವ ಕಾರಣಕ್ಕೆ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆಗೆ ಆಸಕ್ತಿ ತೋರಿದ ಕಾರಣ ಬೆಲೆ ಮುಗಿಲು ಮುಟ್ಟಿತ್ತು. ಆದರೆ ಮಂಗಳವಾರದಂದು ಇಳಿಕೆ ಕಾಣುವ ಮೂಲಕ ಒಂದಷ್ಟು ನೆಮ್ಮದಿ ನೀಡಿದೆ.