ಈಗ ಎಲ್ಲವೂ ಆನ್ ಲೈನ್ ಮಯವಾಗಿದ್ದು ಬಹುತೇಕರು ಕುಳಿತ ಜಾಗದಲ್ಲಿಯೇ ತಮಗೆ ಬೇಕಾದ ವಸ್ತುಗಳನ್ನು ಆನ್ ಲೈನ್ ಮಾರಾಟ ತಾಣಗಳಿಂದ ತರಿಸಿಕೊಳ್ಳುತ್ತಾರೆ. ಹೀಗಾಗಿ ಅಮೆಜಾನ್, ಫ್ಲಿಪ್ಕಾರ್ಟ್, ಮಿಂತ್ರಾ ಸೇರಿದಂತೆ ಬಹುತೇಕ ಆನ್ ಲೈನ್ ಮಾರುಕಟ್ಟೆ ತಾಣಗಳು ಸದಾ ಬೇಡಿಕೆಯಲ್ಲಿರುತ್ತವೆ.
ಕೊರೊನಾ ಸಂದರ್ಭದಲ್ಲಿ ಆನ್ ಲೈನ್ ಮಾರುಕಟ್ಟೆ ತಾಣಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಬಹುತೇಕರು ಆಫ್ಲೈನ್ ಮಾರುಕಟ್ಟೆಗಳಿಗೆ ಭೇಟಿ ನೀಡುವ ಬದಲು ಖರೀದಿಗಾಗಿ ಆನ್ ಲೈನ್ ಮಾರುಕಟ್ಟೆ ಮೊರೆ ಹೋಗಿದ್ದರು. ಇದರ ಜೊತೆಗೆ ರಾಜ್ಯ ಸರ್ಕಾರ ಆನ್ ಲೈನ್ ಮೂಲಕ ಮದ್ಯ ಮಾರಾಟ ಮಾಡಲು ಅನುಮತಿ ನೀಡಬಹುದೆಂಬ ವದಂತಿಯೂ ಹರಡಿತ್ತು.
ಹೀಗಾಗಿ ಮದ್ಯವನ್ನು ಆನ್ ಲೈನ್ ಮೂಲಕ ಮನೆಗೆ ತರಿಸಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿದ್ದ ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ ಇಲ್ಲಿದೆ. ಆನ್ ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳುವ ಮೂಲಕ ಈ ವದಂತಿಗೆ ಇತಿಶ್ರೀ ಹಾಡಿದ್ದಾರೆ.