ಆನ್ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಆನ್ಲೈನ್ ಶಾಪಿಂಗ್ ಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಸೆಳೆಯಲು ಆನ್ಲೈನ್ ಕಂಪನಿಗಳು ಕೂಡ ಸಾಕಷ್ಟು ಆಫರ್ ನೀಡುತ್ತಿವೆ. ಅದ್ರಲ್ಲಿ ನೋ ಕಾಸ್ಟ್ ಇಎಂಐ ಕೂಡ ಒಂದು. ನೋ ಕಾಸ್ಟ್ ಇಎಂಐ ಬಗ್ಗೆ ಗ್ರಾಹಕರು ತಿಳಿದಿರಬೇಕಾಗುತ್ತದೆ.
ಹೆಚ್ಚಿನ ವಸ್ತುಗಳನ್ನು ಮಾರಾಟ ಮಾಡಲು ಕಂಪನಿಗಳು ಜಾರಿಗೆ ತಂದಿರುವ ಯೋಜನೆಗಳಲ್ಲಿ ನೋ ಕಾಸ್ಟ್ ಇಎಂಐ ಒಂದು. ನೋ ಕಾಸ್ಟ್ ಇಎಂಐ ಲಾಭ ಪಡೆಯಲು ಬಯಸುವ ಗ್ರಾಹಕರಿಗೆ ಉತ್ಪನ್ನದ ಮೇಲೆ ಯಾವುದೇ ರಿಯಾಯಿತಿ ಸಿಗುವುದಿಲ್ಲ. ಪೂರ್ಣ ಬೆಲೆಗೆ ವಸ್ತು ಖರೀದಿ ಮಾಡಬೇಕು. ಮೊಬೈಲ್ ಬೆಲೆ 18 ಸಾವಿರವೆಂದ್ರೆ ಇಷ್ಟೂ ಹಣವನ್ನು ಗ್ರಾಹಕರು ಇಎಂಐ ರೂಪದಲ್ಲಿ ನೀಡಬೇಕು. ಮೂರು ತಿಂಗಳು 6 ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಆದ್ರೆ ಈ 6 ಸಾವಿರ ರೂಪಾಯಿಗೆ ಮತ್ತೆ ಬಡ್ಡಿ ಕಟ್ಟಬೇಕಾಗಿಲ್ಲ. ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಮೂರು ತಿಂಗಳು 6 ಸಾವಿರ ರೂಪಾಯಿ ಪಾವತಿ ಮಾಡಿದ್ರೆ ಮುಗಿತು. ಇದನ್ನು ನೋ ಕಾಸ್ಟ್ ಇಎಂಐ ಎನ್ನುತ್ತಾರೆ.
ಇನ್ನೊಂದು ವಿಧಾನದಲ್ಲಿ ಕಂಪನಿಗಳು ಇಎಂಐ ಬಡ್ಡಿಯನ್ನು ಮೊದಲೇ ವಸ್ತುವಿನ ಬೆಲೆಯಲ್ಲಿ ಸೇರಿಸಿರುತ್ತದೆ. ಅಂದ್ರೆ ವಸ್ತು ಖರೀದಿ ವೇಳೆಯೇ ಗ್ರಾಹಕರಿಗೆ ಇಎಂಐ ಬಡ್ಡಿಯನ್ನು ವಸೂಲಿ ಮಾಡಿರುತ್ತದೆ.
ನೋ ಕಾಸ್ಟ್ ಇಎಂಐಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಇದು ಚಿಲ್ಲರೆ ವ್ಯಾಪಾರಿಗಳು, ಬ್ಯಾಂಕುಗಳು ಮತ್ತು ಗ್ರಾಹಕರನ್ನು ಒಳಗೊಂಡಿದೆ. ಉತ್ಪನ್ನಗಳ ಮೇಲೆ ನೋ ಕಾಸ್ಟ್ ಇಎಂಐ ನೀಡುವ ಆಯ್ಕೆ ಬ್ಯಾಂಕುಗಳಿವೆ. ಇದರ ಲಾಭ ಪಡೆಯಲು ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರಬೇಕು. ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಯಿಂದ ಇಎಂಐ ಕಾರ್ಡ್ ಸಹ ಪಡೆಯಬಹುದು.
ಚಿಲ್ಲರೆ ವ್ಯಾಪಾರಿಗಳು ತ್ವರಿತವಾಗಿ ಮಾರಾಟ ಮಾಡಬೇಕಾದ ಉತ್ಪನ್ನಗಳ ಮೇಲೆ ನೋ ಕಾಸ್ಟ್ ಇಎಂಐ ಆಯ್ಕೆ ನೀಡುತ್ತಾರೆ. ನೋ ಕಾಸ್ಟ್ ಇಎಂಐ ಆಯ್ಕೆ ಮಾಡಿಕೊಂಡ ನಂತ್ರ ನೀವು ಸರಿಯಾದ ಸಮಯಕ್ಕೆ ಕಂತು ಪಾವತಿ ಮಾಡಬೇಕು. ಒಂದು ವೇಳೆ ಸರಿಯಾದ ಸಮಯಕ್ಕೆ ಕಂತು ಪಾವತಿ ಮಾಡದೆ ಹೋದಲ್ಲಿ ಬ್ಯಾಂಕ್ ಗಳು ದಂಡವನ್ನು ವಿಧಿಸುತ್ತವೆ. ಈ ದಂಡ ಇಎಂಐ ಬಡ್ಡಿಗಿಂತ ಹೆಚ್ಚಿರುತ್ತದೆ. ಶೇಕಡಾ 2ರಿಂದ 3.5ರಷ್ಟು ದಂಡ ಪಾವತಿಸಬೇಕಾಗುತ್ತದೆ.