ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯನ್ವಯ ಯಾವುದೇ ಭದ್ರತೆಯಿಲ್ಲದೆ ವಾರ್ಷಿಕ ಶೇಕಡಾ 7 ರ ಬಡ್ಡಿ ದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ನೀಡಲಾಗುತ್ತದೆ. ಆದರೆ ಇದಕ್ಕಾಗಿ ರೂಪಿಸಿರುವ ನಿಯಮ ಬೀದಿಬದಿ ವ್ಯಾಪಾರಿಗಳು ಸಾಲ ಪಡೆಯಲು ದೊಡ್ಡ ತೊಡಕುಂಟು ಮಾಡಿದೆ.
ಹೌದು, ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಸಾಲ ಪಡೆಯಬಯಸುವ ಬೀದಿ ಬದಿ ವ್ಯಾಪಾರಿಗಳು ಕಡ್ಡಾಯವಾಗಿ ಯುಪಿಎ ಐಡಿ ಹೊಂದಿರಬೇಕಾಗಿದ್ದು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಅಲ್ಲದೆ ಸಾಲ ಮರುಪಾವತಿಯನ್ನು ಡಿಜಿಟಲ್ ಮಾಧ್ಯಮದ ಮೂಲಕವೇ ಮಾಡಬೇಕಾಗಿದೆ. ಇದಕ್ಕಾಗಿ ಸ್ಮಾರ್ಟ್ಫೋನ್ ಅಗತ್ಯವಿದ್ದು, ಆದರೆ ಜೀವನ ನಡೆಸುವುದೇ ದುಸ್ತರವಾಗಿದೆ ಇಂದಿನ ಪರಿಸ್ಥಿತಿಯಲ್ಲಿ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸುವುದು ಹೊರೆಯಾಗಿ ಪರಿಣಮಿಸಿದೆ.
ಇದರ ಜೊತೆಗೆ ಬ್ಯಾಂಕಿನವರು ಸಾಲ ನೀಡುವ ಸಂದರ್ಭದಲ್ಲಿ 200 ರೂಪಾಯಿ ಮುಖಬೆಲೆಯ ಬಾಂಡುಗಳನ್ನು ಕೇಳುತ್ತಿದ್ದರಲ್ಲದೇ ಜೊತೆಗೆ ಜಾಮೀನುದಾರರೊಬ್ಬರನ್ನು ಕರೆದುಕೊಂಡು ಬರುವಂತೆ ಸೂಚಿಸುತ್ತಿದ್ದಾರೆ ಎನ್ನಲಾಗಿದೆ. ಯಾವುದೇ ಜಾಮೀನು ಇಲ್ಲದೆ ಸಾಲ ನೀಡುವುದಾಗಿ ಹೇಳಿ ಇದೀಗ ಸಾಲ ನೀಡುವ ಸಂದರ್ಭ ನಿಯಮಗಳನ್ನು ಹೇರುತ್ತಿರುವುದು ಬೀದಿಬದಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.