ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿರುವವರ ನೆರವಿಗೆಂದು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಒದಗಿಸಲು ಆತ್ಮ ನಿರ್ಭರ ನಿಧಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ.
ಒಟ್ಟು 50 ಲಕ್ಷ ಮಂದಿಗೆ ಸಾಲ ಒದಗಿಸುವ ಸಲುವಾಗಿ ಐದು ಸಾವಿರ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, 2022 ರ ಮಾರ್ಚ್ 31ರ ತನಕ ಯೋಜನೆ ಅಸ್ತಿತ್ವದಲ್ಲಿರಲಿದೆ. ಶೇಕಡ 7 ರ ಬಡ್ಡಿದರದಲ್ಲಿ ಗರಿಷ್ಠ 10 ಸಾವಿರ ರೂಪಾಯಿಗಳವರೆಗೆ ಬ್ಯಾಂಕುಗಳು ಸಾಲ ನೀಡಲಿವೆ.
ಸಕಾಲಕ್ಕೆ ಸಾಲ ಮರುಪಾವತಿಸಿದವರಿಗೆ ಸಹಾಯಧನ ಕೂಡ ಲಭ್ಯವಾಗಲಿದ್ದು, ಅಲ್ಲದೆ ಅಂತವರಿಗೆ 20 ಸಾವಿರ ರೂ. ಗಳವರೆಗೆ ಸಾಲ ನೀಡಲಾಗುತ್ತದೆ. ಸಾಲ ಸೌಲಭ್ಯ ಪಡೆಯಲು ಬಯಸುವ ಬೀದಿಬದಿ ವ್ಯಾಪಾರಿಗಳ ನೆರವಿಗೆಂದು ‘ಪಿಎಂ ಸ್ವನಿಧಿ’ ಎನ್ನುವ ಮೊಬೈಲ್ ಆಪ್ ಬಿಡುಗಡೆಯಾಗಿದ್ದು, ಇಲ್ಲಿ ಸರಳ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಸಾಲಕ್ಕಾಗಿ ಮನವಿ ಸಲ್ಲಿಸಬಹುದಾಗಿದೆ.