ಮನೆ ಖರ್ಚಿಗೆ ಎಷ್ಟು ದುಡ್ಡಿದ್ದರೂ ಸಾಲುವುದಿಲ್ಲ, ತಿಂಗಳ ಕೊನೆಯಲ್ಲಿ ತರಕಾರಿ ತರಲೂ ಕೈ ಖಾಲಿಯಾಗಿರುತ್ತದೆ ಎನ್ನುವವರಲ್ಲಿ ನೀವೂ ಒಬ್ಬರೇ. ಹಾಗಿದ್ದರೆ ನಿಮ್ಮ ತಿಂಗಳ ಬಜೆಟ್ ಪ್ಲಾನ್ ಅನ್ನು ಹೀಗೆ ಬದಲಾಯಿಸಿ.
ತಿಂಗಳ ಆರಂಭಕ್ಕೆ ಆಯಾ ವಸ್ತುಗಳಿಗೆ ಬೇಕಾಗುವ ಮೊತ್ತವನ್ನು ಪ್ರತ್ಯೇಕವಾಗಿ ತೆಗೆದಿಡಿ. ಅಂದರೆ, ಹಾಲು, ತರಕಾರಿ ಮತ್ತು ದಿನಸಿ ವಸ್ತುಗಳ ಖರೀದಿಗೆ ಬೇಕಾಗುವ ಹಣವನ್ನು ಅಂದಾಜಿನ ಮೇಲೆ ವಿಭಜಿಸಿ ತೆಗೆದಿಡಿ. ವಾರಕ್ಕೆ ಎಷ್ಟು ಮೊತ್ತದ ತರಕಾರಿ ತರುವುದು ಎಂಬುದನ್ನು ಮೊದಲೇ ಯೋಜಿಸಿ.
ಬೆಲೆ ವಿಪರೀತ ಹೆಚ್ಚಿರುವ ತರಕಾರಿಗಳನ್ನು ಒಂದೆರಡು ವಾರ ಕೊಳ್ಳದಿರಿ. ನೀರುಳ್ಳಿ ಬೆಲೆ ನೂರರ ಮೇಲಿದ್ದರೆ ಖರೀದಿ ಮಾಡದಿರಿ. ಹದಿನೈದು ದಿನದಲ್ಲಿ ನಲ್ವತ್ತು ರೂಪಾಯಿಗೆ ಇಳಿದಾಗ ಖರೀದಿಸಿ.
ಕಣ್ಣಿಗೆ ಕಂಡದ್ದೆಲ್ಲಾ ಕೊಳ್ಳುವ ಪ್ರವೃತ್ತಿ ಬಿಟ್ಟು ಯಾವುದು ಅಗತ್ಯವಿದೆ ಅದನ್ನು ಮಾತ್ರ ಕೊಳ್ಳಿ. ಮನೆಗೆ ಕೊಂಡೊಯ್ದ ಬಳಿಕ ತೆಗೆದಿಡುವುದು ಎಂದಾದರೆ ಕೊಳ್ಳುವ ಅಗತ್ಯವೇನು. ಹಾಗಾಗಿ ಅನಗತ್ಯ ವಸ್ತುಗಳನ್ನು ಕೊಳ್ಳದಿರಿ. ದುಂದುವೆಚ್ಚವನ್ನು ಈ ಮೂಲಕ ನಿಯಂತ್ರಿಸಿ.
ತಿಂಗಳು ಮುಗಿಯುತ್ತಲೇ ಆಯಾ ತಿಂಗಳ ಖರ್ಚನ್ನು ವಿಶ್ಲೇಷಿಸಿ. ಯಾವುದು ಅಗತ್ಯವಿರಲಿಲ್ಲ ಎಂಬುದನ್ನು ನೋಡಿಕೊಂಡು, ಮುಂದಿನ ತಿಂಗಳು ಆ ಖರ್ಚನ್ನು ನಿಯಂತ್ರಿಸಿ. ಶಾಪಿಂಗ್ ಮಾಡುವ ಮುನ್ನ ಪಟ್ಟಿ ತಯಾರಿಸಿಕೊಳ್ಳಿ. ಆಗ ಕಂಡಿದ್ದೆಲ್ಲಾ ಕೊಳ್ಳುವ ಪ್ರವೃತ್ತಿಗೆ ಗುಡ್ ಬೈ ಹೇಳಬಹುದು.