ಗ್ರಾಮೀಣ ಜನರಿಗೆ ಸಾರ್ವಜನಿಕ ಪ್ರಾವಿಡೆಂಟ್ ಫಂಡ್, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಇತರ ಅಂಚೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸುಲಭವಾಗಿದೆ. ಅಂಚೆ ಇಲಾಖೆ ಒದಗಿಸಿದ ಮಾಹಿತಿಯ ಪ್ರಕಾರ, ಅಂಚೆ ಕಚೇರಿಯ ಗ್ರಾಮೀಣ ಡಾಕ್ ಸೇವಕ್ ಶಾಖೆಗಳಲ್ಲಿ ಚೆಕ್ ಸೌಲಭ್ಯವಿಲ್ಲ. ಹಾಗಾಗಿ ಫಾರ್ಮ್ ಎಸ್‌ಬಿ -7 ಮೂಲಕ ಠೇವಣಿ ಮತ್ತು ಖಾತೆ ತೆರೆಯಲು ಅವಕಾಶ ನೀಡಲಾಗಿದೆ.
ಅಂಚೆ ಇಲಾಖೆಯ ಈ ನಿರ್ಧಾರದ ನಂತರ ಗ್ರಾಮೀಣ ಜನರಿಗೆ ಖಾತೆ ತೆರೆಯುವುದು ಹಾಗೂ ಠೇವಣಿಯಿಡುವುದು ಸುಲಭವಾಗಿದೆ. ಫಾರ್ಮ್ ಎಸ್‌ಬಿ -7 ನೊಂದಿಗೆ ಉಳಿತಾಯ ಪುಸ್ತಕ ಪಾಸ್ಬುಕ್ ನೀಡಬೇಕು. ಇವಿಷ್ಟನ್ನು ನೀಡಿ ಠೇವಣಿ ಇಡುವುದು ಮತ್ತು ಗ್ರಾಮೀಣ ಡಾಕ್ ಸೇವಕ್ ಶಾಖೆಯಲ್ಲಿ ಹೊಸ ಖಾತೆಗಳನ್ನು ತೆರೆಯಲು ಸಾಧ್ಯ. 5,000 ರೂಪಾಯಿವರೆಗೆ ಈ ಮೂಲಕವೇ ಠೇವಣಿ ಇಡಬಹುದು. 5,000 ರೂಪಾಯಿವರೆಗೆ ಸಾರ್ವಜನಿಕ ಭವಿಷ್ಯ ನಿಧಿ ಖಾತೆ ತೆರೆಯಲು ಇದು ಅನ್ವಯವಾಗಲಿದೆ.
5,000 ರೂಪಾಯಿಗಿಂತ ಹೆಚ್ಚಿನ ಠೇವಣಿಗಳಿಗೆ, ಠೇವಣಿದಾರರು ಪೋಸ್ಟ್ ಆಫೀಸ್ ಉಳಿತಾಯ ಪುಸ್ತಕ ಪಾಸ್‌ಬುಕ್ ಮತ್ತು ಪೇ-ಇನ್-ಸ್ಲಿಪ್ ಜೊತೆಗೆ ಫಾರ್ಮ್ ಎಸ್‌ಬಿ -7 ಅನ್ನು ಒದಗಿಸಬೇಕಾಗುತ್ತದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಯೋಜನೆಗಳ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.