ಅನೇಕರು ನಿವೃತ್ತಿಯ ನಂತರ ಆರ್ಥಿಕ ಸಮಸ್ಯೆ ಎದುರಿಸುತ್ತಾರೆ. ಆ ಸಮಸ್ಯೆ ಎದುರಾಗಬಾರದು ಎಂದ್ರೆ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯನ್ನು ನರೇಂದ್ರ ಮೋದಿ ಸರ್ಕಾರ 2019 ರಲ್ಲಿ ಪ್ರಾರಂಭಿಸಿತು. ಇದರ ಅಡಿಯಲ್ಲಿ ಫಲಾನುಭವಿಗೆ ತಿಂಗಳಿಗೆ ಕನಿಷ್ಠ 3000 ರೂಪಾಯಿಗಳ ಪಿಂಚಣಿ ಸಿಗುತ್ತದೆ. ಪ್ರತಿ ತಿಂಗಳು 55 ರೂಪಾಯಿಗಳನ್ನು ಪಾವತಿಸುವ ಮೂಲಕ ಯೋಜನೆ ಪ್ರಾರಂಭಿಸಬಹುದು.
ನೀವು ಎಷ್ಟು ಹಣವನ್ನು ಠೇವಣಿ ಇಡುತ್ತೀರಿ, ಸರ್ಕಾರವು ಸಹ ಅಷ್ಟೇ ಹಣವನ್ನು ಸಂಗ್ರಹಿಸುತ್ತದೆ. ಇದು ಆನ್‌ಲೈನ್ ಆಗಿರುವುದರಿಂದ ಈ ಯೋಜನೆಯ ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿರುತ್ತದೆ. ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಯ ಲಾಭ ಪಡೆಯಲು ಅಲ್ಪ ಮೊತ್ತವನ್ನು ಜಮಾ ಮಾಡಬೇಕು. 18 ವರ್ಷ ವಯಸ್ಸಾಗಿದ್ದರೆ, ನೀವು ಪ್ರತಿ ತಿಂಗಳು 55 ರೂಪಾಯಿಗಳನ್ನು ಜಮಾ ಮಾಡಬೇಕು. ನಿಮಗೆ 29 ವರ್ಷವಾಗಿದ್ದರೆ, ನೀವು ತಿಂಗಳಿಗೆ 100 ರೂಪಾಯಿ ಜಮಾ ಮಾಡಬೇಕು. ನೀವು 40 ನೇ ವಯಸ್ಸಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರೆ, ನೀವು ತಿಂಗಳಿಗೆ 200 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ.
ಈ ಶ್ರಮ ಯೋಗಿ ಮಾನ್-ಧನ್ ಯೋಜನೆಯಡಿ, ಫಲಾನುಭವಿಯು ಪ್ರತಿ ತಿಂಗಳು 60 ವರ್ಷ ವಯಸ್ಸಿನವರೆಗೆ ಠೇವಣಿ ಇಡಬೇಕಾಗುತ್ತದೆ. 60 ವರ್ಷ ತುಂಬಿದ ನಂತರ, ಫಲಾನುಭವಿಗೆ ತಿಂಗಳಿಗೆ 3000 ರೂಪಾಯಿ ಪಿಂಚಣಿ ಸಿಗುತ್ತದೆ. ಅಂಕಿ ಅಂಶಗಳ ಪ್ರಕಾರ, ಕಳೆದ ವರ್ಷದ ಮೇ 6 ರವರೆಗೆ ಸುಮಾರು 64.5 ಲಕ್ಷ ಜನರು ಈ ಯೋಜನೆಗೆ ಸೇರಿದ್ದಾರೆ.
ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಸರ್ಕಾರ ಈ ಯೋಜನೆ ಲಾಭ ನೀಡ್ತಿದೆ. ರಿಕ್ಷಾ ಚಾಲಕರು, ಕಾರ್ಮಿಕರು, ವ್ಯಾಪಾರಿಗಳು, ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರು ಇದರ ಲಾಭವನ್ನು ಪಡೆಯಬಹುದು. ಈ ಯೋಜನೆಯಡಿ 60 ವರ್ಷಗಳ ನಂತರ ಫಲಾನುಭವಿಯು ಸತ್ತರೆ, ಪ್ರತಿ ತಿಂಗಳು ಪಿಂಚಣಿ ಮೊತ್ತದ ಅರ್ಧದಷ್ಟು ಹಣವನ್ನು ಫಲಾನುಭವಿಯ ನಾಮಿನಿಗೆ ನೀಡಲಾಗುತ್ತದೆ.
18ರಿಂದ 40 ವರ್ಷ ವಯಸ್ಸಿನವರು ಈ ಯೋಜನೆ ಲಾಭ ಪಡೆಯಬಹುದು. ಮಾಸಿಕ ಗಳಿಕೆ 15,000 ರೂಪಾಯಿ ಮೀರಬಾರದು. ನೇರ ತೆರಿಗೆ ಪಾವತಿಸದವರು ಮಾತ್ರ ಈ ಯೋಜನೆಯನ್ನು ಪಡೆಯಬಹುದು. ಸೇವಾ ಕೇಂದ್ರ, ನೌಕರರ ಭವಿಷ್ಯ ನಿಧಿ ಸಂಸ್ಥೆ ವೆಬ್ಸೈಟ್ ನಲ್ಲಿಯೂ ಇದ್ರ ಮಾಹಿತಿ ಸಿಗುತ್ತದೆ.