ಆನ್ ಲೈನ್ ವಹಿವಾಟು ಎಷ್ಟು ಸೇಫ್ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಎಲ್ರೂ ಮೊಬೈಲ್, ಡೆಸ್ಕ್ ಟಾಪ್ ಎಲ್ಲೆಂದರಲ್ಲಿ ಆನ್ ಲೈನ್ ವಹಿವಾಟು ಮಾಡ್ತಿದ್ದಾರೆ. ಈ ಧಾವಂತದಲ್ಲಿ ಎಷ್ಟೋ ಮಂದಿ ಅಕೌಂಟ್ ನಂಬರ್ ತಪ್ಪಾಗಿ ನಮೂದಿಸಿ ಯಾರದ್ದೋ ಖಾತೆಗೆ ಹಣ ಟ್ರಾನ್ಸ್ ಫರ್ ಮಾಡಿದ ಅದೆಷ್ಟೋ ಉದಾಹರಣೆಗಳಿವೆ.
ಇದರ ಮಧ್ಯೆ ಬ್ಯಾಂಕುಗಳು ವಿಲೀನಗೊಂಡಿವೆ. ಹೀಗಾಗಿ ಅಕೌಂಟ್ ನಂಬರ್, ಐ ಎಫ್ ಎಸ್ ಸಿ ಕೋಡ್ ಸೇರಿದಂತೆ ಹಲವು ಬದಲಾವಣೆಗಳಾಗಿವೆ.
ಹೀಗಾಗಿ ತಪ್ಪು ಮೊಬೈಲ್ ಸಂಖ್ಯೆಗೆ ಅಥವಾ ಖಾತೆಗೆ ನೀವು ಹಣ ಟ್ರಾನ್ಸ್ ಫರ್ ಮಾಡಿದ್ರೆ ಏನಾಗುತ್ತೆ, ಆ ಸಂದರ್ಭದಲ್ಲಿ ಏನು ಮಾಡಬೇಕು ಅನ್ನೋದನ್ನು ನೋಡೋಣ.
ತಪ್ಪು ಅಕೌಂಟ್ ನಂಬರ್ ಗೆ ಹಣ ಕಳಿಸಿದ ಸಂದರ್ಭದಲ್ಲಿ ನೀವು ಮೂರು ಕೆಲಸ ಮಾಡಬೇಕು. ಮೊದಲನೆಯದು ಕಾನೂನು ಪ್ರಕಾರ. ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ ಫರ್ ನಲ್ಲಿ ಅಕೌಂಟ್ ನಂಬರ್ ಗೆ ಮಾತ್ರ ಆದ್ಯತೆ, ಹೆಸರಿಗೆ ಹೆಚ್ಚೇನು ಮಹತ್ವವಿಲ್ಲ ಅನ್ನೋದನ್ನು ಆರ್ ಬಿ ಐ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಹೆಸರು ತಪ್ಪಾದ್ರೆ ಆ ಸಮಸ್ಯೆ ಬಳಿಕ ಉದ್ಭವವಾಗುತ್ತದೆ. ನೀವು ನಮೂದಿಸಿದ ತಪ್ಪು ಅಕೌಂಟ್ ನಂಬರ್ ಅಸ್ತಿತ್ವದಲ್ಲಿ ಇಲ್ಲದೇ ಇದ್ರೆ ಹಣ ನಿಮಗೆ ಆಟೋಮ್ಯಾಟಿಕ್ ಆಗಿ ವಾಪಸ್ ಬರುತ್ತದೆ. ಆ ಪ್ರಕ್ರಿಯೆ ಚುರುಕುಗೊಳಿಸುವಂತೆ ನಿಮ್ಮ ಬ್ಯಾಂಕ್ ಗೆ ಅವಸರ ಮಾಡಿ.
ಫಲಾನುಭವಿಯ ಹೆಸರು ಸರಿಯಾಗಿದ್ದು, ಅಕೌಂಟ್ ನಂಬರ್ ತಪ್ಪಾಗಿದ್ದಲ್ಲಿ ಕೂಡಲೇ ನಿಮ್ಮ ಬ್ಯಾಂಕ್ ಗೆ ತೆರಳಿ ಅಗತ್ಯ ದಾಖಲೆ ನೀಡಿ. ಅಮೌಂಟ್ ಟ್ರಾನ್ಸ್ ಫರ್ ನಲ್ಲಿ ಪ್ರಮಾದ ಆಗಿರುವ ಬಗ್ಗೆ ಸೂಕ್ತ ದಾಖಲೆ ಇದ್ದರೆ ಬ್ಯಾಂಕ್ ನವರೇ ಖುದ್ದಾಗಿ ಖಾತೆದಾರರನ್ನು ಸಂಪರ್ಕಿಸಿ ಹಣ ಮರಳಿಸುವಂತೆ ಮನವಿ ಮಾಡುತ್ತಾರೆ.
ನೀವು ತಪ್ಪಾಗಿ ಅಕೌಂಟ್ ನಂಬರ್ ನಮೂದಿಸಿದಾಗ ಫಲಾನುಭವಿಯ ಬದಲು ಅದೇ ಹೆಸರಿನ ಇನ್ಯಾರಿಗೋ ಹಣ ಟ್ರಾನ್ಸ್ ಫರ್ ಆದಾಗ ಆ ವಹಿವಾಟು ತಪ್ಪು ಅನ್ನೋದನ್ನು ನೀವು ಬ್ಯಾಂಕ್ ನವರಿಗೆ ಸಾಬೀತು ಮಾಡಬೇಕು. ಈ ಮೂರು ಸಂದರ್ಭಗಳಲ್ಲೂ ಬ್ಯಾಂಕ್ ನಿಮ್ಮ ಹಣವನ್ನು ವಾಪಸ್ ಪಡೆದು ಕೊಡಲು ಸಾಧ್ಯವಿಲ್ಲ. ಆದ್ರೆ ಮಧ್ಯವರ್ತಿಯಾಗಿ ನಿಮಗೆ ಅನುಕೂಲ ಮಾಡಿಕೊಡಬಹುದು.