ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಯ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಹಣ ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಾಕನೂರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನು 4 -5 ದಿನದಲ್ಲಿ ಖಾಅತೆಗೆ ಜಮೆಯಾಗಲಿದೆ. ಏಪ್ರಿಲ್ ತಿಂಗಳ ಹಣ 8 -10 ದಿನದಲ್ಲಿ ಜಮಾ ಆಗಲಿದೆ ಎಂದು ಹೇಳಿದರು.
ಜನಪರ ಕೆಲಸ ಮಾಡುವುದೆಂದರೆ ನನಗೆ ಹುಚ್ಚು ಇಷ್ಟ. 2013ರಲ್ಲಿ ಚುನಾವಣೆಯಲ್ಲಿ ಸೋತ ನಂತರ ಕೂಡ ಕೆಲಸ ಮಾಡುತ್ತಲೇ ಇದ್ದೆ. ಬೇರೆಯವರಂತೆ ನಾಟಕ ಮಾಡುವುದು ನನಗೆ ಗೊತ್ತಿಲ್ಲ, ಕೆಲಸ ಮಾಡುವುದೊಂದೇ ನನಗೆ ಗೊತ್ತು. ಹಿಂದೆ ಆಯ್ಕೆಯಾದವರು ಬರೇ ಹಿಂದುತ್ವ ಎಂದುಕೊಂಡು ಓಡಾಡಿದ್ದನ್ನು ಬಿಟ್ಟು ಬೇರೇನೂ ಮಾಡಿಲ್ಲ. ನಾನು ಹೇಳುವುದಿಲ್ಲ, ಮಾಡಿ ತೋರಿಸುತ್ತಿದ್ದೇನೆ. ಪ್ರತಿಯೊಂದು ಸಮಾಜಕ್ಕೆ ಸಹಾಯವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ವ ಭಾಷಿಕ, ಸರ್ವ ಜಾತಿಯ ಜನರ ಕೆಲಸ ಮಾಡುತ್ತಿದ್ದೇನೆ. ಸರ್ವ ಕ್ಷೇತ್ರದಲ್ಲೂ ನಂಬರ್ ಒನ್ ಮಾಡುವ ಮೂಲಕ ಬಾರಾಮತಿಯಂತೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ನಾನು ಹೊಂದಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯಷ್ಟೇ ಅಲ್ಲದೆ ಶಿಕ್ಷಣ, ಆರೋಗ್ಯ ಕ್ಷೇತ್ರದ ಔನ್ನತ್ಯಕ್ಕೂ ಕೆಲಸ ಮಾಡುತ್ತಿದ್ದೇನೆ. ರೈತರು ವರ್ಷಕ್ಕೆ 2 -3 ಬೆಳೆ ಬೆಳೆಯುವಂತೆ ನೀರಾವರಿ ಸೌಲಭ್ಯ ಮಾಡಿಕೊಡುವ ಕನಸು ಹೊಂದಿದ್ದೇನೆ ಎಂದರು.

