ಸಾಮಾನ್ಯವಾಗಿ ಲಸಿಕೆ ಎಂದರೆ ಅದು ಕೇವಲ ಮಕ್ಕಳಿಗೆ ಮಾತ್ರ ಎಂಬ ಭಾವನೆ ಹೆಚ್ಚಿನವರಲ್ಲಿದೆ. ಬಾಲ್ಯದಲ್ಲಿ ಚುಚ್ಚುಮದ್ದು ಹಾಕಿಸಿಕೊಂಡ ನಂತರ, ಇನ್ನು ಮುಂದೆ ಇಂಜೆಕ್ಷನ್‌ಗಳ ಕಿರಿಕಿರಿ ಇರುವುದಿಲ್ಲ ಎಂದು ನಾವೆಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತೇವೆ. ಆದರೆ ವಾಸ್ತವದಲ್ಲಿ, 18 ವರ್ಷ ದಾಟಿದ ನಂತರವೂ ನಮ್ಮ ಆರೋಗ್ಯದ ದೃಷ್ಟಿಯಿಂದ ಕೆಲವು ಪ್ರಮುಖ ಲಸಿಕೆಗಳನ್ನು ಪಡೆದುಕೊಳ್ಳುವುದು ಅತ್ಯಂತ ಅಗತ್ಯ. ಈ ಕುರಿತು ಮಣಿಪಾಲ್ ಆಸ್ಪತ್ರೆಯ ನವಜಾತ ಶಿಶು ತಜ್ಞರಾದ ಡಾ. ಅಂಜಲಿ ಎಸ್ ರಾಜ್ ಅವರು ನೀಡಿರುವ ಉಪಯುಕ್ತ ಮಾಹಿತಿ ಇಲ್ಲಿದೆ.
18 ದಾಟಿದ ಮೇಲೆ ನೀವು ಮರೆತಿರಬಹುದಾದ ಪ್ರಮುಖ ಲಸಿಕೆಗಳು ಇಲ್ಲಿವೆ
ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯು ಕಾಲಕ್ರಮೇಣ ಕ್ಷೀಣಿಸುತ್ತಾ ಬರುತ್ತದೆ. ಬಾಲ್ಯದಲ್ಲಿ ಪಡೆದ ಲಸಿಕೆಗಳ ಪರಿಣಾಮ ವಯಸ್ಸಾದಂತೆ ಕಡಿಮೆಯಾಗಬಹುದು. ಅಲ್ಲದೆ, ಪ್ರಯಾಣ, ಕೆಲಸದ ವಾತಾವರಣ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ನಾವು ವಿವಿಧ ರೋಗಕಾರಕಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಬೂಸ್ಟರ್ ಡೋಸ್‌ಗಳನ್ನು ಪಡೆಯುವುದು ಬಹಳ ಮುಖ್ಯ.
ವಯಸ್ಕರು ಪಡೆಯಲೇಬೇಕಾದ ಪ್ರಮುಖ ಲಸಿಕೆಗಳು:
- ಇನ್ಫ್ಲುಯೆನ್ಸ (Influenza): ಪ್ರತಿ ವರ್ಷ ಬದಲಾಗುವ ವೈರಸ್ ತಳಿಗಳಿಂದ ರಕ್ಷಣೆ ಪಡೆಯಲು ವಾರ್ಷಿಕ ಇನ್ಫ್ಲುಯೆನ್ಸ ಲಸಿಕೆ ಅತ್ಯಗತ್ಯ.
- ಟಿಡ್ಯಾಪ್ (Tdap): ಧನುರ್ವಾಯು (Tetanus), ಗಂಟಲಮಾರಿ (Diphtheria) ಮತ್ತು ನಾಯಿ ಕೆಮ್ಮಿನಿಂದ (Pertussis) ರಕ್ಷಣೆ ಪಡೆಯಲು ಪ್ರತಿ 10 ವರ್ಷಕ್ಕೊಮ್ಮೆ ಈ ಬೂಸ್ಟರ್ ಲಸಿಕೆಯನ್ನು ಪಡೆಯಬೇಕು.
- ಎಚ್‌ಪಿವಿ (HPV): ಇದು ಪ್ರಮುಖವಾಗಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
- ಹೆಪಟೈಟಿಸ್ ಬಿ: ಲಿವರ್ ಸಿರೋಸಿಸ್ ಮತ್ತು ದೀರ್ಘಕಾಲದ ಯಕೃತ್ತಿನ ಕಾಯಿಲೆಗಳನ್ನು ತಡೆಗಟ್ಟಲು ಈ ಲಸಿಕೆ ಮುಖ್ಯ. ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇದನ್ನು ಪಡೆಯಲೇಬೇಕು.
- ಎಂಎಂಆರ್ (MMR): ಗರ್ಭಧಾರಣೆಗೆ ಯೋಜಿಸುತ್ತಿರುವ ಮಹಿಳೆಯರಿಗೆ ಈ ಲಸಿಕೆಯನ್ನು ಶಿಫಾರಸು ಮಾಡಲಾಗುತ್ತದೆ.
- ಚಿಕನ್ ಪಾಕ್ಸ್ (Varicella): ಬಾಲ್ಯದಲ್ಲಿ ಚಿಕನ್ ಪಾಕ್ಸ್ ಬಾರದವರು ವಯಸ್ಕರಾದ ಮೇಲೆ ನ್ಯುಮೋನಿಯಾದಂತಹ ಗಂಭೀರ ತೊಂದರೆಗಳನ್ನು ತಡೆಗಟ್ಟಲು ಈ ಲಸಿಕೆ ಪಡೆಯುವುದು ಸೂಕ್ತ.
ಯಾರಿಗೆ ಲಸಿಕೆ ಹೆಚ್ಚು ಅಗತ್ಯ? ದೀರ್ಘಕಾಲದ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರು, ಕೀಮೋಥೆರಪಿ ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಮಾಡುವ ಚಿಕಿತ್ಸೆ ಪಡೆಯುತ್ತಿರುವವರಿಗೆ ಲಸಿಕೆಗಳು ಶ್ರೀರಕ್ಷೆಯಾಗಿವೆ. ಇನ್ನು ಪದೇ ಪದೇ ವಿದೇಶ ಪ್ರಯಾಣ ಮಾಡುವವರು ಆಯಾ ಪ್ರದೇಶದ ಸೋಂಕುಗಳಿಗೆ ಅನುಗುಣವಾಗಿ ಹೆಪಟೈಟಿಸ್ ಎ, ಟೈಫಾಯಿಡ್ ಮತ್ತು ಹಳದಿ ಜ್ವರದಂತಹ ಲಸಿಕೆಗಳನ್ನು ಪಡೆಯಬೇಕು.
ಆರೋಗ್ಯವೇ ಭಾಗ್ಯ ಎಂಬಂತೆ, ಮುನ್ನೆಚ್ಚರಿಕಾ ಕ್ರಮವಾಗಿ ಈ ಲಸಿಕೆಗಳನ್ನು ಪಡೆದುಕೊಳ್ಳುವುದು ನಮ್ಮ ಮುಂದಿನ ಸುಖಮಯ ಜೀವನಕ್ಕೆ ಅಡಿಪಾಯವಾಗಲಿದೆ.

