ಬೆಂಗಳೂರು: ಇಂಧನ ಬಳಕೆ ಕಡಿಮೆ ಮಾಡಿ, ಚಿನ್ನಾಭರಣಗಳ ಖರೀದಿ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ತೈಲ ಬೆಲೆ ಏರುಕೆಗೆ ಕಾರಣವೇನು? ಚಿನ್ನದ ದರ ಹೆಚ್ಚಾಗಲು ಯಾರು ಕಾರಣ? ಯಾರಿಂದ ತೊಂದರೆಯಾಯಿತು ಎಂದು ಪ್ರಧಾನಿ ಮೋದಿ ಮೊದಲು ವಿವರಣೆ ನೀಡಬೇಕು. ಮದುವೆ, ಮುಂಜಿ ಮಾಡುವವರಿಗೆ ಚಿನ್ನ ಖರೀದಿಸಬೇಡಿ ಎಂದರೆ ಎನ್ನಲು ಆಗುತ್ತಾ? ಜೀವನದಲ್ಲಿ ಒಮ್ಮೆ ಮದುವೆಯಾಗುತ್ತಾರೆ. ಮದುವೆ ವೇಳೆ ತಾಳಿ ಕಟ್ಟುತ್ತಾರೆ. ಒಂದು ಚಿನ್ನದ ಸರ ಮಾಡಿಸಿಕೊಳ್ಳುತ್ತಾರೆ. ಅದನ್ನೆಲ್ಲ ಬೇಡ ಎಂದರೆ ಹೇಗೆ? ಪ್ರಧಾನಿ ಮೋದಿ ಹೇಳಿಕೆ ನೀಡುವ ಮುನ್ನ ವಾಸ್ತವವಾಗಿ ಯೋಚಿಸಬೇಕು ಎಂದು ಹೇಳಿದರು.
ಪ್ರಧಾನಿ ಮೋದಿಯವರು ಸಲಹೆ ನೀಡುತ್ತಾರೆ. ಕೋವಿಡ್ ಸಂದರ್ಭದಲ್ಲಿ ದೀಪ ಹಚ್ಚಿ ಅಂದ್ರಿ, ದೀಪ ಹಚ್ಚಿದೆವು. ಚಪ್ಪಾಳೆ ತಟ್ಟಿ ಅಂದ್ರಿ ಚಾಳೆನೂ ತಟ್ಟಿದೆವು, ಕೋವಿಡ್ ಏನಾದ್ರೂ ನಿಂತುಹೋಯ್ತಾ? ಜನರಿಗೆ ನೀವು ಸಲಹೆ ಕೊಡುತ್ತೀರಾ ಆದರೆ ಪ್ರಾಕ್ಟಿಕಲ್ ಆಗಿ ಯೋಚಿಸಬೇಕು ಎಂದರು.
ಜೀವನದಲ್ಲಿ ಕಷ್ಟನೋ ಸುಖನೋ, ಸಾಲ ಸೋಲ ಮಾಡಿ ಮದುವೆ ಮಾಡುವಾಗ ಚಿನ್ನ ಖರೀದಿಸುತ್ತಾರೆ. ಆಗ ಚಿನ್ನ ಖರೀದಿಸಬೇಡಿ ಎಂದರೆ ಆಗುತ್ತಾ? ಕಾರಿನಲ್ಲಿ ಓಡಾಡೋರನ್ನು ಸರ್ಕಾರಿ ಬಸ್ ಗಳಲ್ಲಿ ಓದಾಡಿ ಎನ್ನಲು ಆಗುತ್ತಾ? ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರಿ ಬಸ್, ಮೆಟ್ರೋಗಳಲ್ಲಿ ಓಡಾಡಿ ಅಂತಾ ಹೇಳಿ ಎಂದಿದ್ದಾರೆ.
ಪ್ರಧಾನಿ ಮೋದಿಯವರು ಮೊದಲು ಕೇಂದ್ರ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ತಾಕೀತು ಮಾಡಲಿ. ತಮ್ಮ ಕಾರುಗಳನ್ನು ಬಿಟ್ಟು ಸರ್ಕಾರಿ ಬಸ್ ನಲ್ಲಿ, ಮೆಟ್ರೋ ರೈಲಿನಲ್ಲಿ ಓಡಾಡಿ ಎಂದು ಹೇಳಲಿ. ತಮ್ಮ ಸಂಪುಟ ಸಹೋದ್ಯೋಗಿಗಳು ಪೆಟ್ರೋಲ್ ಬಂಕ್ ಗಳಿಗೆ ಹೋಗದಂತೆ ಹೇಳಲಿ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಚಿವರು, ಶಾಸಕರಿಗೆ, ಕಾರ್ಯಕರ್ತರಿಗೆ ಇದನ್ನು ಅನ್ವಯಿಸಲಿ. ಮೊದಲು ಅವರು ಹಾಗೆ ನಡೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.
ಮೊದಲು ನಾವು ನಡೆದುಕೊಳ್ಳಬೇಕು. ಆಮೇಲೆ ಜನರಿಗೆ ಹೇಳಬೇಕು. ಅದನ್ನು ಬಿಟ್ಟು ತಾವು ಮಾತ್ರ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾ ಜನರಿಗೆ ತ್ಯಾಗಕ್ಕೆ ಸಿದ್ಧರಾಗಿ, ತ್ಯಾಗ ಮಾಡಿ ಎಂದರೆ ಹೇಗೆ? ಎಂದು ಕಿಡಿಕಾರಿದರು.
ತ್ಯಾಗಕ್ಕೆ ಸಿದ್ಧರಾಗಬೇಕೆನ್ನುವವರಿಂದಲೇ ಮೊದಲಿಗೆ ತ್ಯಾಗ ಶುರುವಾಗಲಿ. ಕೇಂದ್ರ ಸಚಿವರು, ಅಧಿಕಾರಿಗಳಿಂದಲೇ ಮೊದಲು ಆರಂಭವಾಗಲಿ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮೊದಲಿಗೆ ತ್ಯಾಗ ಶುರು ಮಾಡಲಿ. ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು ಮೊದಲು ತ್ಯಾಗ ಮಾಡಲಿ. ಆನಂತರ ಬೇರೆ ಬೇರೆಯವರು ಬಿಜೆಪಿಯವರನ್ನು ಅನುಕರಣೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

