ಕಲಬುರಗಿ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗದ ಪೂಜೆಗೆ ಕೋರ್ಟ್ ನಿಂದ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಹೈಕೋರ್ಟ್ ಬಳಿಕ ಸುಪ್ರೀಂ ಕೋರ್ಟ್ ಕೂಡ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲು ಹೈಕೋರ್ಟ್ 14 ಜನರಿಗೆ ಅವಕಾಶ ನೀಡಿದೆ.
ಆಂದೋಲದ ಸಿದ್ದಲಿಂಗ ಸ್ವಾಮೀಜಿ, ಹರ್ಷಾನಂದ ಗುತ್ತೇದಾರ್, ಗುರುಶಾಂತ ಟೆಂಗಳಿ ಸೇರಿದಂತೆ 14 ಜನರಿಗೆ ಪೂಜೆಗೆ ಅವಕಾಶ ನೀಡಲಾಗಿದೆ. ಇಂದು ಮಧ್ಯಾಹ್ನ 2ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಪೂಜೆ ಸಲ್ಲಿಸಲು ಸಮ್ಮತಿ ನೀಡಲಾಗಿದೆ.
ಈಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆಳಂದ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಈಶಾನ್ಯ ವಲಯ ಐಜಿಪಿ ಡಾ.ಶರಣಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೆ.ಎಸ್.ಆರ್.ಪಿ, ಡಿಎಆರ್ ತುಕಡಿ ಸೇರಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ದರ್ಗಾದ ಒಳಗೆ, ದರ್ಗಾ ಸುತ್ತಮುತ್ತ 40ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, 4 ಅತ್ಯಾಧುನಿಕ ಡ್ರೋನ್ ಕ್ಯಾಮರಾಗಳ ಮೂಲಕ ಹದ್ದಿನಕಣ್ಣಿಡಲಾಗಿದೆ.

