ಇಂದು ( ಫೆಬ್ರವರಿ 15 ) ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಹಬ್ಬದ ದಿನ. ಏಕೆಂದರೆ ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಗ್ರೂಪ್ ಹಂತದ ಪಂದ್ಯದಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಈ ಬದ್ಧ ವೈರಿಗಳ ಕಾಳಗದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಕುತೂಹಲ ಎದ್ದಿದ್ದು, ಅದರ ಜತೆಗೆ ಕಳೆದ ಏಷ್ಯಾ ಕಪ್ ವೇಳೆ ಉಂಟಾಗಿದ್ದ ಇತ್ತಂಡಗಳ ನಡುವಿನ ವಿವಾದದ ಬಗ್ಗೆ ಚರ್ಚೆಗಳೂ ಸಹ ಆರಂಭವಾಗಿವೆ.
ಹೌದು, ಏಷ್ಯಾ ಕಪ್ ವೇಳೆ ಭಾರತ ತಂಡದ ಆಟಗಾರರು ಪಾಕ್ ಆಟಗಾರರ ಜತೆ ಹಸ್ತಲಾಘವ ಮಾಡದೇ ತೆರಳಿದ್ದರು. ಇದು ವಿವಾದವನ್ನು ಎಬ್ಬಿಸಿದ್ದು ಮಾತ್ರವಲ್ಲದೇ ಕ್ರೀಡಾಸ್ಪೂರ್ತಿಯ ಬಗ್ಗೆ ಪ್ರಶ್ನೆಯನ್ನು ಸಹ ಹುಟ್ಟುಹಾಕಿತ್ತು.
ಈ ಕುರಿತು ನಿನ್ನೆ ( ಫೆಬ್ರವರಿ 14 ) ನಡೆದ ಪತ್ರಿಕಾಗೋಷ್ಟಿಯಲ್ಲಿ ಸಹ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್‌ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಸೂರ್ಯಕುಮಾರ್ ಯಾದವ್ ‘ಇನ್ನೂ 24 ಗಂಟೆ ಸಮಯವಿದೆ, ಕಾಯಿರಿ. ಈಗಲೇ ಏಕೆ ಅದರ ಬಗ್ಗೆ ಮಾತು? ನಾವು ಇಲ್ಲಿಗೆ ಕ್ರಿಕೆಟ್ ಆಡಲು ಬಂದಿದ್ದು, ಒಳ್ಳೆಯ ಕ್ರಿಕೆಟ್ ಆಡಲಿದ್ದೇವೆ. ಪಾಕ್ ಆಟಗಾರರ ಕುರಿತು ಕೈಕುಲುಕುವ ಕುರಿತು ನಂತರ ತೀರ್ಮಾನ ತೆಗೆದುಕೊಳ್ಳಲಿದ್ದೇವೆ. ಚೆನ್ನಾಗಿ ಊಟ ಮಾಡಿ ನೆಮ್ಮದಿಯಾಗಿ ಮಲಗಿ. ನಾಳೆ ಕುತೂಹಲವನ್ನು ಮುರಿಯಲಿದ್ದೇನೆ. ನಾಳೆ ಏನು ಮುಖ್ಯ? ಪಂದ್ಯ ಮುಖ್ಯ’ ಎಂದು ಹೇಳಿದರು.

