ರೈತರಿಗೆ ಹಗಲು ವೇಳೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನಿರಂತರವಾಗಿ ನೀರಾವರಿ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಉದ್ದೇಶದ ಸೋಲಾರ್ ಪಂಪ್‌ಸೆಟ್ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಿದೆ.
ಕುಸುಮ್-ಬಿ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ರೈತರು ಅತೀ ಕಡಿಮೆ ವೆಚ್ಚದಲ್ಲಿ ಮತ್ತು ಸಬ್ಸಿಡಿ ದರದಲ್ಲಿ ಸೌರ ಪಂಪ್‌ಸೆಟ್‌ಗಳನ್ನು ಪಡೆಯುವ ಮೂಲಕ ನಿರಾಂತಕವಾಗಿ ಕೃಷಿ ಚುಟುವಟಿಕೆಗಳನ್ನು ಕೈಗೊಳ್ಳಬಹುದು.
ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್-ಬಿ ಯೋಜನೆ ರೂಪಿಸಲಾಗಿದೆ. ಯೋಜನೆಯ ಮೂಲಕ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು ಮತ್ತು ಸೌರಶಕ್ತಿ ಬಳಕೆಯ ಉತ್ತೇಜನ ಮಾಡಲು ಸರ್ಕಾರದಿಂದ ಶೇ.80 ರಷ್ಟು ಸಹಾಯಧನ ನೀಡಲಾಗುತ್ತಿದೆ.
ಎಷ್ಟು ಸಹಾಯಧನ ಸಿಗಲಿದೆ?: ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್‌ಸೆಟ್ ಅಳವಡಿಸಲು ಒತ್ತು ನೀಡಿ ರಾಜ್ಯ ಸರ್ಕಾರವು ಸಬ್ಸಿಡಿ ಮೊತ್ತವನ್ನು ಶೇ. 30 ರಿಂದ ಶೇ. 50ಕ್ಕೆ ಹೆಚ್ಚಿಸಿದ್ದು, ರೈತರಿಗೆ ಸೌರ ಫಲಕಗಳು, ಸಬ್ ಮರ್ಸಿಬಲ್/ ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್ ಸ್ಟ್ರಕ್ಟರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ.
ರೈತರು 3 ಹೆಚ್.ಪಿ 5 ಹೆಚ್.ಪಿ, 7.5 ಹೆಚ್.ಪಿ ಮತ್ತು 10 ಹೆಚ್.ಪಿ ಸಾಮರ್ಥ್ಯದ ಸರ್ಫೇಸಬಲ್ ಸಬ್ ಮರ್ಸಿಬಲ್ ಸೌರ ಪಂಪ್‌ಸೆಟ್‌ಗಳನ್ನು ಅಳಡಿಸಿಕೊಳ್ಳಬಹುದಾಗಿದ್ದು,ಇದಕ್ಕೆ ತಗಲುವ ವೆಚ್ಚದಲ್ಲಿ ಶೇ.80 ರಷ್ಟು ಸಹಾಯಧನವನ್ನು ಸರ್ಕಾರ ಪಾವತಿಸಲಿದ್ದು, ಶೇ.20 ರಷ್ಟು ನ್ನು ಫಲಾನುಭವಿಗಳು ಪಾವತಿಸಬೇಕಿದೆ.
ಈ ಸೌರ ಪಂಪ್‌ಸೆಟ್‌ಗಳ ಸ್ಥಾಪನೆ ಸುಲಭವಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದ್ದು, ಸೌರ ಪಂಪ್‌ಸೆಟ್ ಬಳಕೆಯಿಂದ ಸುಮಾರು 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಕೃಷಿ ಭೂಮಿಯಲ್ಲಿ ಅಳವಡಿಸಲಾಗುವ ಸೋಲಾರ್ ಪಂಪ್‌ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ.
ಅನಧಿಕೃತ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಯೋಜನೆಯಡಿ ರೂ. 50 ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ರೈತರು ಅರ್ಜಿ ನೋಂದಾಯಿಸಿದಲ್ಲಿ, ಅಂತಹ ರೈತರ ನೀರಾವರಿ ಪಂಪ್‌ಸೆಟ್‌ಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.
ರೈತರು ತಮ್ಮ ಆಧಾರ್, ಆರ್.ಟಿ.ಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್‌ಲೈನ್ ಪೋರ್ಟಲ್ https://souramitra.com ಮೂಲಕ ನೋಂದಾಯಿಸಿಕೊಳ್ಳಬಹುದಾಗಿದ್ದು, ರೈತರ ನೋಂದಾಣಿ ಸಮಸ್ಯೆಯನ್ನು ಬಗೆಹರಿಸಲು ಕ್ರೆಡಲ್ ನಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ದೂ.ಸಂ.080-22202100 ನ್ನು ಮತ್ತು ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಹೆಸ್ಕಾಂ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ.
ರೈತರು ಈ ಯೋಜನೆಗಾಗಿ ನೇರವಾಗಿ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳ ಕುರಿತಂತೆ ಜಿಲ್ಲೆಯ ವಿದ್ಯುತ್ ಕಚೇರಿಗಳಲ್ಲಿ ಅಗತ್ಯ ಸಹಕಾರ ನೀಡಲಾಗುತ್ತಿದ್ದು, ಅರಣ್ಯ ವ್ಯಾಪ್ತಿಯ ಗ್ರಾಮಗಳು ಮತ್ತು ಗುಡ್ಡಗಾಡು ಪ್ರದೇಶಗಳ ಗ್ರಾಮಗಳಲ್ಲಿನ ರೈತರು ಸೇರಿದಂತೆ ಜಿಲ್ಲೆಯ ರೈತರು ತಮ್ಮ ಜಮೀನಿನ ನೀರಾವರಿ ಸೌಕರ್ಯಗಳಿಗೆ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ನ ಕೊರತೆಯಾಗದಂತೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು.

