HomeLatest Newsಸಾರಿಗೆ ನೌಕರರು ಬಿಕ್ಷುಕರಲ್ಲ, ನಮ್ಮ ಬೆವರಿಗೆ ತಕ್ಕ ವೇತನ ಹಾಗೂ ವೇತನ ಪರಿಷ್ಕರಣೆ ಬಾಕಿ ನೀಡಿ;...

ಸಾರಿಗೆ ನೌಕರರು ಬಿಕ್ಷುಕರಲ್ಲ, ನಮ್ಮ ಬೆವರಿಗೆ ತಕ್ಕ ವೇತನ ಹಾಗೂ ವೇತನ ಪರಿಷ್ಕರಣೆ ಬಾಕಿ ನೀಡಿ; ಸಿಎಂಗೆ ನೌಕರನ ಪತ್ರ

2025ರ ಏಪ್ರಿಲ್ 1ರಿಂದ ವೇತನ ಪರಿಷ್ಕರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರು ಸಾರಿಗೆ ನೌಕರರ ಮುಖಂಡರಿಗೆ ನೀಡಿದ್ದ ಮಾತನ್ನು ಉಲ್ಲೇಖಿಸಿ ಸಾರಿಗೆ ನೌಕರ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಎನ್ ಶ್ರೀನಿವಾಸ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು 27 ತಿಂಗಳ ವೇತನ ಪರಿಷ್ಕರಣೆಯ ಬಾಕಿ ನೀಡಲೇಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಬಿಸಿಲು, ಮಳೆ, ಚಳಿ ಎನ್ನದೇ ರಾಜ್ಯದ ನಾಗರೀಕರು, ವಿದ್ಯಾರ್ಥಿಗಳು, ಹಿರಿಯ ನಾಗರೀಕರು ಹಾಗೂ ವಿಶೇಷ ಚೇತನರಿಗೆ ಸದಾ ಸಂಪರ್ಕ ಸೇತುವೆಯಾಗಿ ಏಷ್ಯಾದ ಹಾಗೂ ರಾಷ್ಟ್ರ ಮಟ್ಟದ ನೂರಾರು ಪ್ರಶಸ್ತಿಗಳನ್ನು ಪಡೆಯುವ ಮಟ್ಟದ ಸೇವೆ ಸಲ್ಲಿಸಿರುವ ಸಾರಿಗೆ ನೌಕರರ ಬೆವರಿಗೆ ತಕ್ಕ ವೇತನ ನೀಡಿ ಹಾಗೂ ವೇತನ ಪರಿಷ್ಕರಣೆಯ ಬಾಕಿ ನೀಡಿ ಎಂದು ಉಲ್ಲೇಖಿಸಿದ್ದಾರೆ.

ಸಾರಿಗೆ ನೌಕರರು ಬಿಕ್ಷುಕರಲ್ಲ, ಶ್ರಮ ಜೀವಿಗಳಾಗಿದ್ದು ತಮ್ಮ ದುಡಿಮೆಯ ಪ್ರತಿಫಲವನ್ನು ಕೇಳುತ್ತಿದ್ದೇವೆ ಹೊರತು ಬಿಕ್ಷೆಯನ್ನಲ್ಲ . ಭಾರತ ರತ್ನ ಅಂಬೇಡ್ಕರ್ ಅವರ ಅನುಯಾಯಿಯಾದ ತಾವು ಸಮಾನತೆ ಕಾಯುವ ಮುಖ್ಯಮಂತ್ರಿಯಾಗಿದ್ದು, ತಮ್ಮ ಅವಧಿಯಲ್ಲಿ ಸಾರಿಗೆ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಚೇರಿಯಲ್ಲಿ ಕುಳಿತು ಆರೇಳು ಗಂಟೆ ಕೆಲಸ ಮಾಡುವ ನೌಕರರಿಗೆ ಏಳನೇ ವೇತನ ಜಾರಿ ಮಾಡಿದ್ದೀರಿ, ಯಾವುದೇ ಮುಷ್ಕರ ಮಾಡದಿದ್ದರೂ ಬೆಸ್ಕಾಂ ನೌಕರರಿಗೆ ಬರಪೂರ ವೇತನ ಹೆಚ್ಚಳ ಮಾಡಿದ್ದೀರ. ಆದರೆ ಸಾರಿಗೆ ನೌಕರರು ಸಾಲು ಸಾಲು ಬೇಡಿಕೆ ಇಟ್ಟರೂ ವೇತನ ಪರಿಷ್ಕರಣೆ ಬಾಕಿ ನೀಡದಿರುವುದು, ವೇತನ ಹೆಚ್ಚಳ ಮಾಡದೇ ಇರದಿರುವುದು ಸಂವಿಧಾನದ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಸಮಯದಲ್ಲಿ ನಮ್ಮ ಪರ ಬ್ಯಾಟ್ ಬೀಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಚುನಾವಣಾ ಭಾಷಣದಲ್ಲಿ ಛೇಡಿಸಿ ನಮ್ಮ ಕುಟುಂಬದ ಮತಗಳನ್ನು ಪಡೆದು ಚುಣಾವಣೆ ಗೆದ್ದ ತಾವು ಬಳಿಕ ನಮ್ಮನ್ನೇ ಮರೆತಿದ್ದೀರ, ಅಂದು ತಾವು ಆಡಿದ ಮಾತುಗಳು ಮರೆತುಹೋಯಿತೇ? ಎಂದು ಸಿಎಂಗೆ ತಾವು ಕೊಟ್ಟಿದ್ದ ಆಶ್ವಾಸನೆಯನ್ನು ನೆನಪಿಸಿದ್ದಾರೆ.

ಸಾರಿಗೆ ಸಂಸ್ಥೆ ನಷ್ಟ ಅನುಭವಿಸಿದೆ ಎನ್ನುವ ಕಾರಣ ಕೊಡುತ್ತಾರೆ. ಒಂದುವೇಳೆ ನಷ್ಟ ಅನುಭವಿಸಿದ್ದೇ ಆಗಿದ್ದರೆ ಅದಕ್ಕೆ ಕಾರಣ ಸಾರಿಗೆ ನೌಕರರಲ್ಲ, ಬದಲಾಗಿ ಈವರೆಗೆ ರಾಜ್ಯವನ್ನಾಳಿದ ಸರ್ಕಾರಗಲು ಕಾರಣ. ಕಳಪೆ ಬಸ್‌ಗಳ ಖರೀದಿ, ಕಳಪೆ ಇಟಿಎಂಗಳ ಖರೀದಿ, ಕಳಪೆ ಬಿಡಿಭಾಗಗಳ ಖರೀದಿ ಹಾಗೂ ಕಳಪೆ ಸಿವಿಲ್ ಕಾಮಗಾರಿಗಳನ್ನು ಮಾಡಿದ್ದರಿಂದ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.

ನೌಕರರಿಂದ ಯಾವುದೇ ಕಾರಣಕ್ಕೂ ನಷ್ಟವಾಗಿಲ್ಲ. ನೌಕರರನ್ನು ಅಮಾನತ್ತು ಮಾಡಿದ್ದಕ್ಕೆ, ವಜಾಗೊಳಿಸಿದ್ದಕ್ಕೆ ಹಾಗೂ ವರ್ಗಾವಣೆ ಮಾಡಿದ್ದಕ್ಕೆ ಸಂಸ್ಥೆ ನೂರಾರು ಕೋಟಿ ಲಾಭ ಗಳಿಸಿದೆ ಎಂದು ಶ್ರೀನಿವಾಸ್ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೇ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಬಡ ಜನರಿಗೂ ಸಾರಿಗೆ ಸುಲಭವಾಗಿ ದೊರಕಲಿ ಎನ್ನುವ ಉದ್ದೇಶದಿಂದ ಸಾವಿರಾರು ಕೋಟಿ ಅನುದಾನವನ್ನು ನೀಡಿತ್ತು. ಆದರೆ ರಾಜ್ಯವನ್ನಾಳುತ್ತಿದ್ದ ಬಿಜೆಪಿ ಅವಶ್ಯಕತೆ ಇಲ್ಲದಿದ್ದರೂ ಬಸ್‌ ನಿಲ್ದಾಣಗಳನ್ನು ನಿರ್ಮಿಸಿ, ಕಳಪೆ ಬಸ್ ಖರೀದಿಸಿ, ಕಾಮಗಾರಿ ಮಾಡಿ ಹಣವನ್ನು ಪೋಲು ಮಾಡಿತು ಎಂದು ಬರೆದಿದ್ದಾರೆ.

ಇನ್ನು ಸಿದ್ದರಾಮಯ್ಯನವರಿಗೆ ಸವಾಲು ಹಾಕಿರುವ ಶ್ರೀನಿವಾಸ್ ರಾಜ್ಯದ ಎಲ್ಲ ಶಾಸಕರು, ಸಂಸದರು, ಐಪಿಎಎಸ್, ಐಎಎಸ್, ಐಎಫ್‌ಎಸ್ ಹಾಗೂ ಎಲ್ಲ ಸರ್ಕಾರಿ ನೌಕರರು ಸಾರಿಗೆ ಸಿಬ್ಬಂದಿಯಾಗಿ 24 ಗಂಟೆಗಳ ಕಾಲ ಕೆಲಸ ಮಾಡಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದುಕೊಳ್ಳಿ ಎಂದು ಆಹ್ವಾನಿಸಿದ್ದಾರೆ.

ಅಥವಾ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಎನ್ನುವ ತಾವು ಸಾರಿಗೆ ಸಂಸ್ಥೆ ಸ್ಥಾಪನೆಯಾದಾಗಿನಿಂದ 2025ರ ಡಿಸೆಂಬರ್ 31ರವರೆಗೆ ಸಂಸ್ಥೆಯ ಖರ್ಚು, ಆದಾಯ, ಲಾಭ ಹಾಗೂ ನಷ್ಟದ ಮಾಹಿತಿಯ ಶ್ವೇತಪತ್ರ ಹೊರಡಿಸಿ. ಇಲ್ಲವೇ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಸಂವಿಧಾನದ ಮೇಲೆ ವಿಧಾನಸೌಧದ ಮುಂದೆ ರಾಜ್ಯಪಾಲರು, ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಮಾಣ ಮಾಡಿ ಎಂದು ಸವಾಲು ಎಸೆದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular