ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ತನ್ನ ಕೋಟ್ಯಂತರ ಚಂದಾದಾರರ ಖಾತೆಗೆ ಕಾಲಕಾಲಕ್ಕೆ ಬಡ್ಡಿಯ ಹಣವನ್ನು ಜಮಾ ಮಾಡುತ್ತಿರುತ್ತದೆ. ಆದರೆ, ನಿಮ್ಮ ಪಿಎಫ್ (PF) ಖಾತೆಗೆ ಬಡ್ಡಿ ಬಂದಿದೆಯೇ? ಪ್ರಸ್ತುತ ನಿಮ್ಮ ಖಾತೆಯಲ್ಲಿ ಒಟ್ಟು ಎಷ್ಟು ಹಣ ಉಳಿತಾಯವಾಗಿದೆ? ಎಂಬ ಗೊಂದಲ ಅನೇಕರಲ್ಲಿರುತ್ತದೆ.
ಇನ್ನು ಮುಂದೆ ಗಾಬರಿಯಾಗುವ ಅಗತ್ಯವಿಲ್ಲ. ಕೇವಲ ಒಂದು ಮಿಸ್ಡ್ ಕಾಲ್ ಅಥವಾ ಎಸ್‌ಎಮ್‌ಎಸ್ ಮೂಲಕವೂ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಆ ನಾಲ್ಕು ಸರಳ ವಿಧಾನಗಳು ಇಲ್ಲಿವೆ:
ಇಪಿಎಫ್‌ಒ ಪೋರ್ಟಲ್ ಮೂಲಕ (Online Portal)
ಇದು ನಿಮ್ಮ ಪಿಎಫ್ ಪಾಸ್‌ಬುಕ್ ಅನ್ನು ವಿವರವಾಗಿ ನೋಡಲು ಇರುವ ಅತ್ಯುತ್ತಮ ಮಾರ್ಗವಾಗಿದೆ.
ಮೊದಲಿಗೆ EPFO ಅಧಿಕೃತ ವೆಬ್‌ಸೈಟ್ (www.epfindia.gov.in) ಭೇಟಿ ನೀಡಿ.
Our Services ಮೆನುವಿನಲ್ಲಿ For Employees ಆಯ್ಕೆ ಕ್ಲಿಕ್ ಮಾಡಿ.
ಅಲ್ಲಿ Services ಅಡಿಯಲ್ಲಿರುವ Member Passbook ಮೇಲೆ ಕ್ಲಿಕ್ ಮಾಡಿ.
ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
ಲಾಗಿನ್ ಆದ ನಂತರ ನಿಮ್ಮ ಮೆಂಬರ್ ಐಡಿ ಆರಿಸಿದರೆ, ಜಮೆಯಾದ ಬಡ್ಡಿ ಸೇರಿದಂತೆ ಸಂಪೂರ್ಣ ವಿವರ ಕಾಣಿಸುತ್ತದೆ.
ಎಸ್‌ಎಮ್‌ಎಸ್ (SMS) ಮೂಲಕ ಮಾಹಿತಿ
ನಿಮ್ಮ ಬಳಿ ಇಂಟರ್ನೆಟ್ ಇಲ್ಲದಿದ್ದರೂ ಚಿಂತೆಯಿಲ್ಲ, ಒಂದು ಎಸ್‌ಎಮ್‌ಎಸ್ ಕಳುಹಿಸುವ ಮೂಲಕ ಮಾಹಿತಿ ಪಡೆಯಬಹುದು.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ಕ್ಕೆ ಸಂದೇಶ ಕಳುಹಿಸಬೇಕು.
ಕನ್ನಡದಲ್ಲಿ ಮಾಹಿತಿ ಪಡೆಯಲು: EPFOHO UAN KAN ಎಂದು ಟೈಪ್ ಮಾಡಿ ಕಳುಹಿಸಿ (UAN ಜಾಗದಲ್ಲಿ ನಿಮ್ಮ 12 ಅಂಕಿಯ ಯುಎನ್ ಸಂಖ್ಯೆ ಇರಲಿ).
ಮಿಸ್ಡ್ ಕಾಲ್ (Missed Call) ನೀಡಿ
ಇದು ಎಲ್ಲಕ್ಕಿಂತ ಸುಲಭವಾದ ಮಾರ್ಗ. ಯಾವುದೇ ಸ್ಮಾರ್ಟ್‌ಫೋನ್ ಇಲ್ಲದಿದ್ದರೂ ಈ ಸೇವೆ ಬಳಸಬಹುದು.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425 ಅಥವಾ 011-22901406 ಕ್ಕೆ ಮಿಸ್ಡ್ ಕಾಲ್ ನೀಡಿ.
ಕರೆ ಕಡಿತಗೊಂಡ ಕೆಲವೇ ಕ್ಷಣಗಳಲ್ಲಿ ನಿಮ್ಮ ಬ್ಯಾಲೆನ್ಸ್ ವಿವರವಿರುವ ಎಸ್‌ಎಮ್‌ಎಸ್ ನಿಮ್ಮ ಫೋನ್‌ಗೆ ಬರುತ್ತದೆ.
.ಉಮಂಗ್ (UMANG) ಆ್ಯಪ್ ಬಳಕೆ
ಸ್ಮಾರ್ಟ್‌ಫೋನ್ ಬಳಕೆದಾರರು ಸರ್ಕಾರದ ಅಧಿಕೃತ ಉಮಂಗ್ ಆ್ಯಪ್ ಮೂಲಕವೂ ಬ್ಯಾಲೆನ್ಸ್ ಪರಿಶೀಲಿಸಬಹುದು.
ಉಮಂಗ್ ಆ್ಯಪ್‌ನಲ್ಲಿ EPFO ಸೇವೆಯನ್ನು ಹುಡುಕಿ.
View Passbook ಆಯ್ಕೆಯನ್ನು ಆರಿಸಿ, ನಿಮ್ಮ UAN ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸಿ ಲಾಗಿನ್ ಆಗುವ ಮೂಲಕ ವಿವರ ಪಡೆಯಬಹುದು.
ಗಮನಿಸಬೇಕಾದ ಅಂಶ: ಈ ಮೇಲಿನ ಸೇವೆಗಳನ್ನು ಪಡೆಯಲು ನಿಮ್ಮ UAN ಸಂಖ್ಯೆ ಸಕ್ರಿಯವಾಗಿರಬೇಕು (Active). ಜೊತೆಗೆ ನಿಮ್ಮ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಖಾತೆಯ ಕೆವೈಸಿ (KYC) ಪೂರ್ಣಗೊಂಡಿರುವುದು ಕಡ್ಡಾಯವಾಗಿದೆ.

