ಬೆಂಗಳೂರು: ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಉದ್ಯಾನಗಳು(ಸಂರಕ್ಷಣೆ) ತಿದ್ದುಪಡಿ ಮಸೂದೆಯನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉದ್ಯಾನ ಮಸೂದೆ ಹಿಂಪಡೆಯುವ ನಿರ್ಧಾರ ಜನಪರ ಬದ್ಧತೆಯ ಪ್ರತೀಕ ಎಂದು ಹೇಳಿದ್ದಾರೆ.
ಕರ್ನಾಟಕದ ಜನತೆಯ ಭಾವನೆಗಳನ್ನು ನಮ್ಮ ಸರ್ಕಾರ ಸದಾ ಗೌರವಿಸುತ್ತದೆ. ಕರ್ನಾಟಕ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯುವ ಸಚಿವ ಸಂಪುಟದ ನಿರ್ಧಾರವೂ ಇದೇ ಜನಪರ ಬದ್ಧತೆಯ ಪ್ರತೀಕ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಅಭಿಪ್ರಾಯ, ಕಳಕಳಿ ಮತ್ತು ಭಾವನೆಗಳಿಗೆ ಬೆಲೆ ನೀಡಿ, ನಮ್ಮ ಉದ್ದೇಶವನ್ನು ಮತ್ತಷ್ಟು ಸ್ಪಷ್ಟವಾಗಿ ಜನರ ಮುಂದಿಡಲು ಹಾಗೂ ಅಗತ್ಯ ತಿದ್ದುಪಡಿಗಳೊಂದಿಗೆ ವಿಧೇಯಕವನ್ನು ಮರು ಮಂಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ನ್ಯಾಯಾಧೀಶರು. ಜನತಾ ನ್ಯಾಯಾಲಯದ ಮುಂದೆ ನಮ್ಮ ಉದ್ದೇಶವನ್ನು ಪ್ರಾಮಾಣಿಕವಾಗಿ ಮಂಡಿಸಿ, ಜನವಿಶ್ವಾಸದೊಂದಿಗೆ ಮುಂದುವರಿಯುವುದು ನಮ್ಮ ಸರ್ಕಾರದ ಧ್ಯೇಯ ಎಂದು ಸಿಎಂ ಹೇಳಿದ್ದಾರೆ.

