ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಹಗರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದು, ದಿನಕ್ಕೊಂದು ಮಾಹಿತಿಗಳು ಲಭ್ಯವಗುತ್ತಿವೆ.
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. 3 ರಿಂದ 5 ಲಕ್ಷ ರೂಪಾಯಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಲಾಗಿತ್ತು ಎಂದು ಆರೋಪಿ ಬಸವರಾಜ್ ಕನ್ನಾಳೆ ಸಿಐಡಿ ಮುಂದೆ ಬಾಯ್ಬಿಟ್ಟಿದ್ದಾನೆ.
ಸಿಐಡಿ ತನಿಖೆಯ ಬೆನ್ನಲ್ಲೇ ಇದೀಗ ಜಾರಿ ನಿರ್ದೇಶನಾಲಯ (ED) ಈ ಪ್ರಕರಣದಲ್ಲಿ ಎಂಟ್ರಿ ನೀಡಿದೆ. ಕಳಂಕಿತ ಪ್ರಮುಖ ಆರೋಪಿಗಳಾದ ಬಸವರಾಜ್ ಕನ್ನಾಳೆ ಮತ್ತು ಜ್ಞಾನೇಂದ್ರ ಕುಮಾರ್ ಅವರನ್ನು ಸತತವಾಗಿ ವಿಚಾರಣೆಗೆ ಒಳಪಡಿಸುತ್ತಿದೆ. ಇನ್ನೊಂದೆಡೆ, ಪರೀಕ್ಷೆಗೂ ಮುನ್ನವೇ ದೇವನಹಳ್ಳಿ ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳಿಗೆ ಉತ್ತರ ಬರೆಸಿದ ಜಾಲ ಹಾಗೂ ಕೋಟ್ಯಂತರ ರೂಪಾಯಿ ಅಕ್ರಮ ಹಣಕಾಸು ವ್ಯವಹಾರದ ಕುರಿತು ಮಾಹಿತಿ ಲಭ್ಯವಾಗಿದೆ.
ತನಿಖೆಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ದೇವನಹಳ್ಳಿ ರೆಸಾರ್ಟ್‌ನಲ್ಲಿ ಪೇಪರ್ ಲೀಕ್ ಆಗಿದೆ. ಜ್ಞಾನೇಂದ್ರನಿಂದ ಬಸವರಾಜ್ ಕನ್ನಾಳೆ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದ ಎಂಬುದು ಬಯಲಾಗಿದೆ.
ರಾಜಾಜಿನಗರ ಮತ್ತು ಮೆಜೆಸ್ಟಿಕ್‌ನಿಂದ ಅಭ್ಯರ್ಥಿಗಳನ್ನು ವಿಶೇಷ ಕ್ಯಾಬ್‌ಗಳಲ್ಲಿ ದೇವನಹಳ್ಳಿಯ ರೆಸಾರ್ಟ್‌ಗೆ ಕರೆದೊಯ್ದು ಉತ್ತರ ಸಿದ್ಧಪಡಿಸಿ ಪರೀಕ್ಷೆಯ ದಿನವೇ ಸೆಂಟರ್‌ಗೆ ಕನ್ನಾಳೆ ಕಳುಹಿಸಿದ್ದ
ಕನ್ನಾಳೆಯ ಬಳಿ ತರಬೇತಿ ಪಡೆದ ಕೆಲ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳ ಬಳಿಯೇ ಇತರ ಅಭ್ಯರ್ಥಿಗಳಿಗೆ ₹3 ರಿಂದ ₹5 ಲಕ್ಷ ರೂಪಾಯಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಸದ್ಯ ಸಿಐಡಿಯಿಂದ ರೆಸಾರ್ಟ್ ಸಿಸಿಟಿವಿ, ಕ್ಯಾಬ್ ಹಾಗೂ ಕನ್ನಾಳೆಯ ಕಾರು ವಶಪಡಿಸಿಕೊಳ್ಳಲಾಗಿದೆ. ರೆಸಾರ್ಟ್ ಸೆಕ್ಯುರಿಟಿ ಗಾರ್ಡ್ ಪ್ರಮುಖ ಸಾಕ್ಷಿಯಾಗಿದ್ದು, ಕೆಪಿಎಸ್‌ಸಿ ಸಿಬ್ಬಂದಿ, ಆರೋಪಿಗಳು ಹಾಗೂ ಲಂಚ ನೀಡಿದ ಅಭ್ಯರ್ಥಿಗಳು ಸೇರಿದಂತೆ 400ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಕರಣದ ಅತಿ ಪ್ರಮುಖ ಸಾಕ್ಷ್ಯಗಳಾದ ಮೊಬೈಲ್ ಮತ್ತು ಪೆನ್‌ಡ್ರೈವ್‌ಗಳನ್ನು ಶ್ರೀರಂಗಪಟ್ಟಣದ ಕಾವೇರಿ ನದಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು ಈ ಹಿನ್ನೆಲೆಯಲ್ಲಿ ಸಿಐಡಿ ತಂಡ ಕಾವೇರಿ ನದಿ ಬಳಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಇಡಿ ವಿಚಾರಣೆ ವೇಳೆ ಬಸವರಾಜ್ ಕನ್ನಾಳೆ ತಪ್ಪು ಮಾಹಿತಿ ನೀಡಿದ್ದಾನೆ. ದಿನಕ್ಕೆ 400 ಲೀಟರ್ ಹಾಲು ಮಾರ್ತೀವಿ, ಹಸು-ಎಮ್ಮೆ ಸಾಕಣೆ ಹಾಗೂ ಟ್ರಾವೆಲ್ಸ್ ಉದ್ಯಮವಿದೆ ಎಂದು ಕನ್ನಾಳೆ ಹಾರಿಕೆ ಉತ್ತರ ನೀಡಿದ್ದಾನೆ.
ಕೋಟ್ಯಂತರ ಹಣದ ವಹಿವಾಟು ಹಾಗೂ ಆದಾಯ ತೆರಿಗೆ ಸಲ್ಲಿಕೆ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಮುಂದುವರೆಸಿದೆ. ಕೋಟ್ಯಂತರ ಹಣದ ವಹಿವಾಟಿಗೆ ಸೂಕ್ತ ಆಧಾರವಿಲ್ಲದ ಕಾರಣ ಇಡಿ ಸಂಪೂರ್ಣ ಆಸ್ತಿಯ ಮುಟ್ಟುಗೋಲು ಹಕೈಕೊಳ್ಳಲು ಇಡಿ ಸಿದ್ಧತೆ ನಡೆಸಿದೆ.

